ಶಿವಮೊಗ್ಗ,ಜನವರಿ-3: ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಪ್ರತಿಭೆಗಳ ಅನಾವರಣಕ್ಕೆ ರಾಜ್ಯಮಟ್ಟದ ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಒಟ್ಟು 18 ಪ್ರಕಾರಗಳಲ್ಲಿ ಮೂರು ದಿನಗಳ ಕಾಲ ವಿವಿಧ ಸ್ಪರ್ಧೆಗಳು ನಡೆಯಲಿವೆ. ಇಂತಹ ಯುವಜನೋತ್ಸವಗಳಲ್ಲಿ ಇನ್ನೊಬ್ಬರ ಪ್ರತಿಭೆಗಳನ್ನು ಗಮನಿಸಿ ಹೊಸತನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಲಖ್ನೋದಲ್ಲಿ ರಾಷ್ಟ್ರೀಯ ಮಟ್ಟದ ಯುವಜನೋತ್ಸವ ನಡೆಯಲಿದ್ದು, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ರಾಜ್ಯಕ್ಕೆ ಕೀರ್ತಿಯನ್ನು ತನ್ನಿ ಎಂದು ಸಚಿವರು ಹಾರೈಸಿದರು.
ಸನ್ಮಾನ: ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ ಗಣೇಶ ಶರ್ಮ, ಆನಂದ ಗೌಡ ಪಾಟೀಲ್ ಮತ್ತು ಪದ್ಮಶ್ರೀ ಮೈಸೂರು ಇವರನ್ನು ಸಚಿವರು ಈ ಸಂದರ್ಭದಲ್ಲಿ ಸನ್ಮಾನಿಸಿದರು.

ರಾಜ್ಯ ಮಟ್ಟದ ಯುವ ಜನೋತ್ಸವ ಜನವರಿ 5ರವರೆಗೆ ನಡೆಯಲಿದ್ದು, ರಾಜ್ಯದ 30 ಜಿಲ್ಲೆಗಳ 15ರಿಂದ 29ವರ್ಷದ ಒಳಗಿನ ಸುಮಾರು 1500 ಸ್ಪರ್ಧಾಗಳುಗಳು ಭಾಗವಹಿಸುತ್ತಿದ್ದಾರೆ. ಜಾನಪದ ನೃತ್ಯ/ಗೀತೆ, ಏಕಾಂಕ ನಾಟಕ, ಕ್ಲಾಸಿಕಲ್ ಓಕಲ್ ಸೋಲೊ, ಇನ್‍ಸ್ಟ್ರುಮೆಂಟ್ ಸೋಲೊ, ತಬಲಾ, ಮೃದಂಗ, ಹಾರ್ಮೋನಿಯಂ, ಗಿಟಾರ್, ಕ್ಲಾಸಿಕಲ್ ಡ್ಯಾನ್ಸ್, ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷ ವೇದಾ ವಿಜಯಕುಮಾರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್.ರಮೇಶ್, ಸಹಾಯಕ ನಿರ್ದೇಶಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!