ಶಿವಮೊಗ್ಗ : ಜುಲೈ 22 : ಸಾರ್ವಜನಿಕರ ಆಶಯಗಳಿಗೆ ಪೂರಕವಾಗಿ ಶಿಕಾರಿಪುರ ತಾಲೂಕನ್ನು ಅಭಿವೃದ್ಧಿಪಡಿಸಿ ರಾಜ್ಯದ ಮಾದರಿ ನಗರಗಳಲ್ಲೊಂದಾಗಿ ರೂಪಿಸಲಾಗಿದೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರು ಇಂದು ಶಿಕಾರಿಪುರ ಸಮಿಪದ ಅಂಜನಾಪುರ ಜಲಾಶಯಕ್ಕೆ ಪರಿವಾರದ ಸದಸ್ಯರೊಂದಿಗೆ ಆಗಮಿಸಿ, ಬಾಗಿನ ಅರ್ಪಿಸಿದ ನಂತರ ಏರ್ಪಡಿಸಲಾಗಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕಾರಿಪುರ ತಾಲೂಕಿನ ಜನರಿಗೆ ಅಗತ್ಯವಾಗಿರುವ ಅದರಲ್ಲೂ ವಿಶೇಷವಾಗಿ ಕೃಷಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಸಂಸದ ರಾಘವೇಂದ್ರ ಅವರ ಸಹಕಾರದೊಂದಿಗೆ ಅವಿರತವಾಗಿ ಶ್ರಮಿಸಲಾಗಿದೆ. ತಾಲೂಕಿನ ಎಲ್ಲಾ ಹೋಬಳಿಗಳ ಕೃಷಿ ಭೂಮಿಗೆ ನೀರನ್ನು ಒದಗಿಸಲು ಸುಮಾರು 2000ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲು ತಾಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿ ವಿದ್ಯುತ್ ಒದಗಿಸಲಾಗಿದೆ ಎಂದರು.
ಅನ್ನದಾತನ ನೆಮ್ಮದಿಯ ಬದುಕಿಗೆ ಹಾಗೂ ತಾಲೂಕಿನ ಜನರ ಜೀವನಾಡಿಯಾಗಿರುವ ಅಂಜನಾಪುರ ಜಲಾಶಯ ಭರ್ತಿಯಾಗಿ ನೀರು ಹರಿಯುತ್ತಿರುವುದು ಸಹಜವಾಗಿ ಸಂತಸ ಮನೆ ಮಾಡಿದೆ ಎಂದರು.
ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಧಾನಿಯವರು ಅತ್ಯಂತ ಪ್ರಾಮಾಣಿಕವಾಗಿ ಯತ್ನಿಸುತ್ತಿದ್ದಾರೆ. ಅಲ್ಲದೆ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರವು ಜನಪರವಾಗಿರುವ ಅನೇಕ ಯೋಜನೆಗಳಲ್ಲಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಫಲಾನುಭವಿಗಳಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಬಿ.ವೈ.ವಿಜಯೇಂದ್ರ’ ತಹಶಿಲ್ದಾರ ಕವಿರಾಜ್, ಬಿ.ಡಿ.ಭೂಕಾಂತ್, ಬಣಕಾರ್, ಶ್ರೀಮತಿ ರೇಖಾಬಾಯಿ, ಚನ್ನವೀರಪ್ಪ ಎಂ.ಬಿ., ಭದ್ರಾಪುರದ ಹಾಲಪ್ಪ, ವೀರೇಂದ್ರ ಪಾಟೀಲ್, ಕೊಳಗಿ ರೇವಣಪ್ಪ ಮುಂತಾದವರು ಉಪಸ್ಥಿತರಿದ್ದರು.