ಶಿವಮೊಗ್ಗ, ಜನವರಿ 19 : ದೇಶದ ಎಲ್ಲಾ ಯುವಜನರಿಗೆ ಉದ್ಯೋಗಾವಕಾಶ ಲಭಿಸಿ, ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ
7, 10, ಪಿ.ಯು.ಸಿ., ಐ.ಟಿ.ಐ., ಬಿ.ಇ., ಯಾವುದೇ ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರವು ರಾಜ್ಯದಲ್ಲಿನ ಯಾವುದೇ ವಿದ್ಯಾರ್ಹತೆಯ ಯುವಜನತೆಗೆ ಉದ್ಯೋಗಾವಕಾಶವನ್ನು ಸೃಜಿಸಿ ಒದಗಿಸುವ ಸದುದ್ದೇಶದಿಂದ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಎಲ್ಲರ ದೃಷ್ಟಿ ಇಂದಿನ ಯುವಜನತೆಯ ಮೇಲಿದೆ. ಈ ಯುವಶಕ್ತಿ ವ್ಯರ್ಥವಾಗದೆ ಸದ್ವಿನಿಯೋಗವಾಗಬೇಕೇಂದವರು ನುಡಿದರು.
ಉದ್ಯೋಗವನ್ನರಸುವ ಪ್ರತಿಯೊಬ್ಬರೂ ಜನಸೇವೆ ಮಾಡುವ ಅದಮ್ಯ ಉತ್ಸಾಹ ಹೊಂದಿರಬೇಕು. ಮಾತ್ರವಲ್ಲ ಶುದ್ಧಹಸ್ತರಾಗಿರಬೇಕು ಎಂದ ಅವರು ಆರಂಭದಲ್ಲಿ ಸಿಗುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ ಅನುಭವ ಹೊಂದಬೇಕು ಇದರಿಂದಾಗಿ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವಿಶ್ವಾಸ ಮೂಡಲಿದೆ ಎಂದರು.
ನಿರೀಕ್ಷಿತ ಉದ್ಯೋಗ ದೊರೆಯಲಿಲ್ಲವೆಂಬ ಹತಾಶೆ ಬೇಡ. ಮರಳಿ ಪ್ರಯತ್ನ ಮಾಡಿದಾಗ ಯಶಸ್ಸು ಖಂಡಿತವಾಗಿಯೂ ದೊರೆಯಲಿದೆ. ಮೊದಲು ಉದ್ಯೋಗಿಗಳಾಗಿ, ನಂತರ ಉದ್ಯೋಗದಾತರಾಗಿ ಅನೇಕರಿಗೆ ಉದ್ಯೋಗ ಒದಗಿಸುವಂತಾಗಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಾಸುದೇವ ಜೆ.ಆರ್. ಅವರು ಮಾತನಾಡಿ, ತಾವು ಬಯಸುವ ಉದ್ಯೋಗ ಹೊಂದಲು ನಿಗಧಿತ ವಿದ್ಯಾರ್ಹತೆ, ಕೌಶಲ್ಯ ಹೊಂದಿರಬೇಕು ಎಂದ ಅವರು ಯಾವುದೇ ವ್ಯಕ್ತಿ ಪರಾವಲಂಬಿಗಳಾಗದೇ ಸ್ವತಂತ್ರ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅದಕ್ಕಾಗಿ ಕನಸುಗಳಿರಲಿ. ಅದಕ್ಕಾಗಿ ಅನುಭವ ಹೊಂದಿರುವುದು ಸೂಕ್ತವಾದುದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಅವರು ಮಾತನಾಡಿ, ರಾಜ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿಫುಲ ಅವಕಾಶಗಳಿವೆ. ಕೈಗಾರಿಕೆ, ಸೇವಾ ಚಟುವಟಿಕೆಗಳಿಗೆ ಕೈಗಾರಿಕಾ ಇಲಾಖೆ ಉತ್ತೇಜನ ನೀಡಲಿದೆ. ಶೇ.15-35 ಪ್ರೋತ್ಸಾಹಧನದೊಂದಿಗೆ ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ನೀಡಲಾಗುತ್ತಿದೆ. ಕೈಗಾರಿಕೆಗಳಿಗೆ 25ಲಕ್ಷ ಹಾಗೂ ಸೇವಾ ವಲಯಗಳಿಗೆ 10ಲಕ್ಷ ರೂ.ಗಳವರೆಗೆ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗ ಕೈಗೊಳ್ಳಬಹುದಾಗಿದೆ. ಇಂತಹ ಹಲವು ಉದ್ಯೋಗಾವಕಾಶಗಳಿಗಾಗಿ ಅನೇಕ ಜಾಲತಾಣದಲ್ಲಿ ಮಾಹಿತಿ ಲಭ್ಯವಿದೆ. ಅಲ್ಲದೆ ಕೈಗಾರಿಕಾ ನೀತಿಯನ್ವಯ ಹಲವು ವಿಷಯಗಳಲ್ಲಿ ರಿಯಾಯಿತಿ ಹಾಗೂ ಉತ್ತೇಜನ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಕೆ.ಎನ್. ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಹಸ್ರಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.