ಶಿವಮೊಗ್ಗ : ಮೇ 26 : ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮ್ಯಾನ್ಯುಯಲ್ ಸ್ಕಾವೆಂಜರ್‍ಗಳ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಈವರೆಗೆ ಸಮೀಕ್ಷೆ ನಡೆಸದಿರುವ ಹಾಗೂ ಬಾಕಿ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಜೂನ್ ಮಾಸಾಂತ್ಯದೊಳಗಾಗಿ ಸಮೀಕ್ಷೆ ನಡೆಸಿ, ಕ್ರೋಡೀಕೃತ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ ವೃತ್ತಿ ನಿಷೇಧ ಮತ್ತು ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ನೇರಪಾವತಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಾಗೂ ಅಂಗೀಕೃತ ಸಂಸ್ಥೆಯ ಸಹಯೋಗದಲ್ಲಿ ಗುರುತಿನ ಪತ್ರವನ್ನು ನೀಡಲು ಸೂಚಿಸಲಾಗಿದೆ ಎಂದರು.
ಸ್ವಚ್ಚತಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂಧಿಗಳು ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಬಳಸದಿರುವುದು ಗಮನಕ್ಕೆ ಬಂದಿದೆ. ಸ್ವಚ್ಚತಾ ಕಾರ್ಮಿಕರು ಈ ಪರಿಕರಗಳನ್ನು ಬಳಸಿಕೊಂಡು ತಮ್ಮ ಆರೋಗ್ಯ ಸುರಕ್ಷತೆಗೆ ಗಮನಹರಿಸುವಂತೆ ಸೂಚಿಸಿದ ಅವರು, ಕಾರ್ಮಿಕರಿಗೆ ನೀಡಿರುವ ಸುರಕ್ಷತಾ ಪರಿಕರಗಳ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಚತಾ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆಯೆ?, ಅವರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸಲಾಗಿದೆಯೇ?, ಉಪಹಾರ, ವಸತಿ, ವಿಶ್ರಾಂತಿಗೃಹ ಮುಂತಾದ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈವರೆಗೆ ಆರೋಗ್ಯ ತಪಾಸಣೆ ನಡೆಸದಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮುಂದಿನ ಸಭೆಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಚತಾ ಕಾರ್ಮಿಕರು ನಿವೃತ್ತಿಗೊಂಡಿದ್ದಲ್ಲಿ ಅಂತಹ ಕಾರ್ಮಿಕರ ಕುಟುಂಬದ ಅವಲಂಬಿತರಿಗೆ ಉದ್ಯೋಗಾವಕಾಶ/ನೇಮಕಾತಿಯಲ್ಲಿ ಆದ್ಯತೆ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ಸ್ವಚ್ಚತಾ ಕಾರ್ಮಿಕರ ಅನುಕೂಲಕ್ಕಾಗಿ ಅವಕಾಶವಿರುವೆಡೆಯಲ್ಲಿ ವಿಶ್ರಾಂತಿಗೃಹಗಳನ್ನು ನಿರ್ಮಿಸುವಂತೆ ಸೂಚಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಲೋಡರ್ಸ್ ಮತ್ತು ಡ್ರೈವರ್‍ಗಳ ನೇರಪಾವತಿ ವೇತನದಲ್ಲಿದ್ದು, ಇವರಿಗೆ ಕನಿಷ್ಟ ವೇತನ ಮತ್ತು ಇ.ಎಸ್.ಐ./ಪಿ.ಎಫ್. ಜಮೆಯಾಗದಿರುವ ಬಗ್ಗೆ ಅಹವಾಲುಗಳಿದ್ದು, ಕೂಡಲೇ ಈ ಸಂಬಂಧ ಗಮನಹರಿಸುವಂತೆ ಅವರು ಸೂಚಿಸಿದರು.
ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್‍ಗಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅಹವಾಲುಗಳ ಕೇಳಿ ಬರುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ಕಾರ್ಖಾನೆಗಾಗಿ ಪ್ರತ್ಯೇಕವಾದ ಸಕ್ಕಿಂಗ್ ಯಂತ್ರವನ್ನು ಕೊಂಡುಕೊಂಡು ಬಳಸಿಕೊಳ್ಳುವಂತೆ ಸೂಚಿಸಿದ ಅವರು ಇದೇ ಪುನರಾವರ್ತನೆಯಾದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ನಗರ ಯೋಜನಾ ಘಟಕದ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಕೆ.ಜಯಲಕ್ಷ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಜಿ+ ಮಾದರಿ ಆಶ್ರಯ ಮನೆ ಹಂಚಲು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ
ಶಿವಮೊಗ್ಗ, ಮೇ 26 (ಕರ್ನಾಟಕ ವಾರ್ತೆ): ಶಿವಮೊಗ್ಗ ನಗರದ ಗೋಪಿಶೆಟ್ಟಿ ಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ರಾಜೀವ್‍ಗಾಂಧಿ ಗ್ರಾಮೀಣ ನಿಗಮ, ಬೆಂಗಳೂರು ಇವರ ಆದೇಶದಂತೆ ನಗರ ಆಶ್ರಯ ಸಮಿತಿ ತೀರ್ಮಾನಿಸಿರುವ ಪ್ರಕಾರ ಜಿ+ ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು Shivamoggacitycorp.org ಜಾಲತಾಣದ ‘Ashraya Yojana Apllicaton’ ಮೆನುವಿನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಅವಧಿ ಮೇ 11 ರಿಂದ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ. ಹಾಗೂ ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಲು ಜುಲೈ 06 ಕಡೆಯ ದಿನವಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. (ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಪುರುಷ ಅಭ್ಯರ್ಥಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.)
ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರು ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ / ಮನೆಯನ್ನು ಹೊಂದಿರಬಾರದು. ಬೇg
ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು. ಹಾಗೂ ಈ ಹಿಂದೆ ಯಾವುದಾದರು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡುವುದು. ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ (ರೂ.86,700 ಕ್ಕಿಂತ ಕಡಿಮೆ ಆದಾಯ) ಹೊಂದಿರಬೇಕು. ತೃತೀಯ ಲಿಂಗಿಗಳೂ (ಟ್ರಾನ್ಸ್‍ಜೆಂಡರ್) ಸಹ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ: ಸಾಮಾನ್ಯ ಪ್ರವರ್ಗ-1, 2(ಎ), 2(ಬಿ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ 200/- ಇಎಂಡಿ ಮೊತ್ತ ರೂ.8000/- ಒಟ್ಟು ರೂ.8200/- ಆಗಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ರೂ.100/- ಇಎಂಡಿ ಮೊತ್ತ 5000/- ಒಟ್ಟು 5100/- ಆಗಿರುತ್ತದೆ. ಆನ್‍ಲೈನ್‍ನಲ್ಲಿ ಅರ್ಜಿ ತುಂಬಿದ ನಂತರ ಜನರೇಟೆಡ್ ಚಲನ್‍ನೊಂದಿಗೆ ನಿಗದಿತ ಶುಲ್ಕವನ್ನು ಕೆನರಾ ಬ್ಯಾಂಕ್ ಎಲ್ಲಾ ಶಾಖೆಗಳು/ಬ್ಯಾಂಕ್ ಆಫ್ ಬರೋಡದ ಎಸ್.ಆರ್.ಶಾಖೆಗಳು / ಇಂಡಿಯನ್ ಬ್ಯಾಂಕ್‍ನ ಮಹಾನಗರ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಮೀಸಲಾತಿ ವಿವರ: ಪರಿಶಿಷ್ಟ ಜಾತಿ ಶೇ.30%, ಪರಿಶಿಷ್ಟ ಪಂಗಡ ಶೇ.10%, ಅಲ್ಪಸಂಖ್ಯಾತರು ಶೇ.10%, ಸಾಮಾನ್ಯ ವರ್ಗ ಶೇ.50% ಆಗಿರುತ್ತದೆ.

error: Content is protected !!