ಶಿವಮೊಗ್ಗ. ಮೇ 24 : ಕಾರಾಗೃಹ ವಾಸಿಗಳು ತಮ್ಮಲ್ಲಿನ ಕ್ರೋಧ ಹಾಗೂ ನೋವುಗಳನ್ನು ಮರೆತು ಸ್ವಾಭಾವಿಕವಾಗಿ ಬದುಕಲು ಪೂರಕವಾಗಿರುವಂತೆ ಅವರಲ್ಲಿನ ಸುಪ್ತ ಹಾಗೂ ಸಾಂಸ್ಕøತಿಕ ಪ್ರತಿಭೆಯನ್ನು ಹೊರಗೆಡುವುದರ ಜೊತೆಗೆ ಅವರ ಮನಪರಿವರ್ತನೆಗೆ ರಂಗಯಾತ್ರೆ ಪ್ರೇರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಮೈಸೂರಿನ ಸಂಕಲ್ಪ ರಂಗತಂಡವು ಕರ್ನಾಟಕ ಕಾರಾಗೃಹ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಮೇ 29, 30 ಮತ್ತು 31ರಂದು ಪ್ರತಿದಿನ ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಕಾರಾಗೃಹ ನಿವಾಸಿಗಳಿಂದ ಜೈಲಿನಿಂದ ಜೈಲಿಗೆ ರಂಗಯಾತ್ರೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಈ ರೀತಿಯ ಕಾರ್ಯಕ್ರಮಗಳಿಂದ ಕಾರಾಗೃಹದಲ್ಲಿ ಬಂಧಿಯಾಗಿದ್ದವರು ಬಿಡುಗಡೆಗೊಂಡು ಅವರದೇ ಆದ ತಂಡಗಳನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಮಾತ್ರವಲ್ಲ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಆದ್ದರಿಂದ ಬಂಧಿಗಳ ಮನಪರಿವರ್ತನೆಗೆ ರಂಗಭೂಮಿ ಪರಿಣಾಮಕಾರಿ ಮಾಧ್ಯಮವಾಗಿ ಪರಿಣಮಿಸಿದೆ. ಕಾರಾಗೃಹವಾಸಿಗಳು ಹೊರ ಜಗತ್ತಿನಿಂದ ದೂರು ಉಳಿಯುವುದರ ಜೊತೆಗೆ ಸಮಾಜದ ಅವಕೃಪೆಗೆ ಒಳಗಾಗಿ ಮಾನವೀಯ ಮೌಲ್ಯಗಳಿಂದಲೂ ದೂರ ಉಳಿದ ಹಲವು ದೃಷ್ಟಾಂತ ಪ್ರಕರಣಗಳಿವೆ ಎಂದವರು ನುಡಿದರು.
ಮೇ 29ರಂದು ಜಯಂತ ಕಾಯ್ಕಿಣಿ ಅವರ ಜತೆಗಿರುವನು ಚಂದಿರ, ಮೇ 30ರಂದು ಡಾ|| ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ ಒಂದು ವಿಶ್ಲೇಷಣೆ ಹಾಗೂ ಮೇ 31ರಂದು ರಂಗಗೀತೆಗಳು, ಕಾರಾಗೃಹ ರಂಗಭೂಮಿ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾರಾಗೃಹ ಅಧೀಕ್ಷಕಿ ಶ್ರೀಮತಿ ದಿವ್ಯಶ್ರೀ ಅವರು ಇದೊಂದು ವಿನೂತನ ರಂಗಪ್ರಯೋಗ. ಖೈದಿಗಳ ಮನಪರಿವರ್ತನೆಗೆ ಪ್ರೇರಣೆಯಾಗಲಿದೆ. ಈ ರೀತಿಯ ಪ್ರಯೋಗಗಳು ಎಲ್ಲೆಡೆ ಆಗುವಂತಾಗಬೇಕು. ಬಂಧಿಗಳ ಮನಪರಿವರ್ತನೆ ಹಾಗೂ ಸಾಮಾಜೀಕರಣ ಆಗುವಂತಾಗಬೇಕೆಂಬ ಆಶಯ ಹೊಂದಿರುವುದಾಗಿ ತಿಳಿಸಿದರು.
ನಾಟಕಗಳ ರಂಗರೂಪ ಮತ್ತು ವಿನ್ಯಾಸ ಮಾಡಿರುವ ಹುಲಗಪ್ಪ ಕಟ್ಟೀಮನಿ ಅವರು ಇದೊಂದು ಸಾಹಸದ ಕಾರ್ಯವಾಗಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಇದಲ್ಲವೂ ಸಾಕಾರಗೊಂಡಿದೆ ಎಂದ ಅವರು, ಈ ರಂಗತಂಡದಲ್ಲಿ ಖೈದಿಗಳನ್ನೆ ಬಳಸಿಕೊಂಡು ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಪ್ರಸ್ತುತ ಅಭಿನಯಿಸಲಾಗುತ್ತಿರುವ ನಾಟಕಗಳಲ್ಲಿ ಮೈಸೂರಿನ ಬಂಧಿಖಾನೆಯಲ್ಲಿನ ಬಂಧಿಗಳು ಹಾಗೂ ಬಿಡುಗಡೆಗೊಂಡಿರುವ ಖೈದಿಗಳು ಅಭಿನಯಿಸಲಿದ್ದಾರೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಡಾ||ಸಾಸ್ವೇಹಳ್ಳಿ ಸತೀಶ್, ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಹಿರೇಮಾಗಡಿ, ಜಿ.ಲವ, ಹೊನ್ನಾಳಿ ಚಂದ್ರಶೇಖರ್, ಡಾ|| ಮಲ್ಲಿಕಾರ್ಜುನ ಮೇಟಿ ಸೇರಿದಂತೆ ಬಿಡುಗಡೆಯಾದ ಕಲಾವಿದ ಖೈದಿಗಳು ಮುಂತಾದವರು ಉಪಸ್ಥಿತರಿದ್ದರು.

error: Content is protected !!