ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದ್ದ ಎಲ್ಲಾ ಆರೋಗ್ಯ ಸೇವೆಗಳನ್ನು ಗುರುವಾರದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಸೋಮವಾರ ಶಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಜನಪ್ರತಿನಿಧಿಗಳು ಹಾಗೂ ಕಾಲೇಜಿನ ಹಿರಿಯ ವೈದ್ಯಾಧಿಕಾರಿಗಳ ಸಭೆಯಲ್ಲಿ ಮೆಗ್ಗಾನ್ ಆಸ್ಪತ್ರೆ ಸೇವೆಗಳನ್ನು ಉತ್ತಮಪಡಿಸುವ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 69 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರ ಪೈಕಿ 29ಮಂದಿ ಈಗಾಗಲೇ ಗುಣಮುಖರಾಗಿ ಹಿಂತಿರುಗಿದ್ದಾರೆ. ಇನ್ನುಳಿದಿರುವ 40ಮಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬ್ಲಾಕ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯನ್ನು ಮೊದಲಿನಂತೆ ಇನ್ನಿತರ ಎಲ್ಲಾ ಚಿಕಿತ್ಸೆಗಳಿಗೆ ಬಳಸಲಾಗುತ್ತಿದೆ. ಇನ್ನು ಯಾವುದೇ ಚಿಕಿತ್ಸೆಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುವುದಿಲ್ಲ. ಎಲ್ಲಾ ವಿಧದ ಚಿಕಿತ್ಸೆಗಳನ್ನು ಮೆಗ್ಗಾನ್ನಲ್ಲಿಯೇ ಆರಂಭಿಸಲಾಗುತ್ತಿದೆ ಎಂದರು.
ಮೆಗ್ಗಾನ್ನಲ್ಲಿ ಒಟ್ಟು 16 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಶನಿವಾರದಿಂದ ಪೂರ್ಣ ಪ್ರಮಾಣದ ಡಯಾಲಿಸಿಸ್ ಸೇವೆ ಮೆಗ್ಗಾನ್ನಲ್ಲಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ವೈದ್ಯರ ಗೈರು ಹಾಜರಾತಿಗೆ ಎಚ್ಚರಿಕೆ: ಶಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ 130ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬಹುತೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಕೇವಲ ಸಹಿ ಮಾಡಿ ಹೋಗುತ್ತಿದ್ದಾರೆ. ಶಿಮ್ಸ್ನಲ್ಲಿರುವ ವಿದ್ಯಾರ್ಥಿಗಳು ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಕರ್ತವ್ಯದಲ್ಲಿರಬೇಕಾದ ವೈದ್ಯರು ವಾಟ್ಸಾಪ್ ಮೂಲಕ ಈ ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ನಿರಂತರ ದೂರುಗಳು ಬರುತ್ತಿವೆ.
ಎಲ್ಲಾ ವೈದ್ಯರು ಕಡ್ಡಾಯವಾಗಿ ಡ್ಯೂಟಿ ಸಮಯದಲ್ಲಿ ಆಸ್ಪತ್ರೆಯಲ್ಲಿರುವಂತೆ ನೋಡಿಕೊಳ್ಳಬೇಕಾದುದು ನಿರ್ದೇಶಕರ ಜವಾಬ್ದಾರಿ. ವೈದ್ಯರ ಹಾಜರಾತಿಗಾಗಿ ಫೇಸ್ ರೀಡಿಂಗ್ ಯಂತ್ರ ಸೇರಿದಂತೆ ಅಗತ್ಯ ಯಂತ್ರಗಳನ್ನು ಖರೀದಿಸಬೇಕು. ಕರ್ತವ್ಯದಲ್ಲಿರುವ ವೈದ್ಯರ ಪಟ್ಟಿಯನ್ನು ಎಲ್ಲರಿಗೆ ಕಾಣುವಂತೆ ಪ್ರತಿದಿನ ಪ್ರಕಟಿಸಬೇಕು. ಶಿಮ್ಸ್ ಆಡಳಿತ ಮಂಡಳಿಯ ಮೂರು ಮಂದಿ ನಾಮನಿರ್ದೇಶಿತ ಸದಸ್ಯರ ವಿಜಿಲೆನ್ಸ್ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.
ಔಷಧಿಗಳನ್ನು ವೈದ್ಯರು ಹೊರಗೆ ಖರೀದಿಸಲು ಚೀಟಿ ಬರೆದುಕೊಡುವಂತಿಲ್ಲ. ಮೆಗ್ಗಾನ್ನಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಬೇಕಿದ್ದರೆ, ಆಯಾ ವಿಭಾಗದ ಮುಖ್ಯಸ್ಥರು ಮಾತ್ರ ಶಿಫಾರಸು ಮಾಡಬಹುದಾಗಿದೆ. ಖಾಸಗಿ ಅಂಬುಲೆನ್ಸ್ಗಳು ಮೆಗ್ಗಾನ್ ಆವರಣದ ಒಳಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ಶಾಶಕರಾದ ಅರಗ ಜ್ಞಾನೇಂದ್ರ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಶಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ದಿವಾಕರ ಶೆಟ್ಟಿ, ಡಾ.ವಾಣಿ ಕೋರಿ, ಡಾ.ಗೌತಮ್, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ, ಜಿಲ್ಲಾ ಸರ್ಜನ್ ಡಾ.ರಘನಂದನ್ ಮತ್ತಿತರರು ಉಪಸ್ಥಿತರಿದ್ದರು.