ಅಣಬೆ ಅಧಿಕ ಪ್ರೋಟಿನಯುಕ್ತವಾದ ಒಂದು ಶಿಲೀಂದ್ರ ಇದರ ಉತ್ಪಾದನೆಗೆ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣವೇನೇಂದರೆ. ಅಣಬೆಯನ್ನು ಆಂಗ್ಲ ಭಾಷೆಯಲ್ಲಿ ‘ಮಶ್ರೂಂ’ (Mushroom) ಎಂದೂ ಕರೆಯುತ್ತಾರೆ. ಅಣಬೆಯನ್ನು ಪ್ರಾಚೀನ ಕಾಲದಿಂದಲೂ ಮುಖ್ಯವಾಗಿ ಚೀನಾ, ಈಜಿಪ್ಟ ಮತ್ತು ಗ್ರೀಕ್ ದೇಶಗಳಲ್ಲಿ ಉಪಯೋಗಿಸುತ್ತಿದ್ದುದರ ಬಗ್ಗೆ ಅನೇಕ ದಾಖಲಾತಿಗಳು ಲಭ್ಯವಿದೆ. ಅಣಬೆಯಲ್ಲಿ ಸರಿ ಸುಮಾರು 10,000ಕ್ಕೂ ಹೆಚ್ಚು ಪ್ರಭೇದಗಳಿದ್ದು, ಇವುಗಳಲ್ಲಿ ಸುಮಾರು 70 ಪ್ರಭೇದಗಳು ಕೃತಕ ಕೃಷಿಗೆ ಯೊಗ್ಯವಾಗಿವೆ.
ಇವುಗಳನ್ನು ಜನಪ್ರೀಯವಾಗಿ ‘ಸಸ್ಯಹಾರಿ ಮಾಂಸ’ ಎಂದು ಕರೆಯುತ್ತಾರೆ. ಇದನ್ನು ಆಹಾರ ಪದಾರ್ಥಗಳ ಪಟ್ಟಿಯಲ್ಲಿ ತರಕಾರಿ ಪದಾರ್ಥವನ್ನಾಗಿ ಸೇರಿಸಿದೆ. ಅಣಬೆಯು ಮೃದುತ್ವ ಮತ್ತು ವಿವಿಧ ಮಸಾಲೆಯ ಪರಿಮಳವನ್ನು ಅಳವಡಿಸಿಕೊಳ್ಳುವ ಗುಣವನ್ನು ಹೊಂದಿದೆ. ತಿನ್ನುವ ಅಣಬೆ ಪೌಷ್ಥಿಕ ಆಹಾರ ವಸ್ತು. ಅಣಬೆಯಲ್ಲಿ ಪ್ರೋಟಿನ ಮತ್ತು ಜೀವಸತ್ವಗಳು ಹೆರಳವಾಗಿದ್ದು ಶರ್ಕರ, ಪಿಷ್ಠ, ಕೊಬ್ಬು, ಸಕ್ಕರೆ ಕಡಿಮೆ ಇರುವದರಿಂದ ಮದುಮೇಹ ಮತ್ತು ರಕ್ತದ ಒತ್ತಡ ಹೊಂದಿರುವ ಜನರಿಗೆ ಬಹಳ ಮಹತ್ವದ ಆಹಾರವಾಗಿದೆ ಎಂದು ವೈಜ್ಞಾನಿಕವಾಗಿ ದೃಡಪಡಿಸಲಾಗಿದೆ. ಅಷ್ಟೆ ಅಲ್ಲದೆ ಇದರಲ್ಲಿ ಸಸಾರಜನಕ, ಕೆಲವು ಮುಖ್ಯವಾದ ಅನ್ನಾಂಗಗಳು ಮತ್ತು ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಣಬೆಯನ್ನು ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಇತ್ತೀಚಿನ ದಿನಗಳಲ್ಲಿ ಬಳಸುತ್ತಿದ್ದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಇದನ್ನು ವ್ಯವಸಾಯ ಮೂಲದಿಂದ ಬರುವ ತ್ಯಾಜ್ಯವಸ್ತುಗಳ ಸಹಾಯದಿಂದ ಮನೆ ಅಂಗಳದಲ್ಲಿಯೇ ಬೆಳೆಯಬಹುದಾಗಿದ್ದು, ಹೆಚ್ಚಿನ ಭೂಮಿಯ ಅಗತ್ಯತೆ ಇರುವುದಿಲ್ಲ. ಆದ್ದರಿಂದ ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಮತ್ತು ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.
ಹೀಗಾಗಿ ವಿದ್ಯಾವಂತ, ನಿರುದ್ಯೋಗಿ ಯುವಕರಿಗೆ ಮತ್ತು ಮಹಿಳೆಯರಿಗೆ ಅಣಬೆ ಕೃಷಿ ಒಂದು ವರದಾನ. ಅಣಬೆ ಇತರೆ ಸಸ್ಯಗಳಿಗಿಂತ ಭಿನ್ನವಾಗಿದ್ದು ಪತ್ರಹರಿತ್ತ (ಅhಟoಡಿoಠಿhಥಿಟಟ) ನ್ನು ಹೊಂದಿಲ್ಲದ ಕಾರಣ ಸ್ವಯಂ ಆಹಾರವನ್ನು ತಯಾರಿಸಿಕೊಳ್ಳಲು ಸಾಧ್ಯವಿಲ್ಲ. ಆದ ಕಾರಣ ಅಣಬೆ ಬೇರೊಂದು ವಸ್ತುವಿನ ಆಶ್ರಯವನ್ನು ಪಡೆದು ಬೆಳೆಯುತ್ತದೆ. ಇದರಿಂದ ಬಹು ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದು.
ಮಿಲ್ಕಿ ಅಣಬೆ (ಕ್ಯಾಲೋಸೈಬೆ ಇಂಡಿಕ)- ಬೇಸಾಯ ಕ್ರಮ
ತಿನ್ನುವ ಅಣಬೆಗಳಲ್ಲಿ ಮಿಲ್ಕಿ ಅಣಬೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದಕ್ಕೆ ಕಾರಣ ಈ ಅಣಬೆಯ ಆಕರ್ಷಕತೆ ಹಾಗೂ ಇದರ ರುಚಿ. ಅಲ್ಲದೆ ಈ ಅಣಬೆಯಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದ್ದು ಅಧಿಕ ಶೇಕರಣಾ ಸಾಮಥ್ರ್ಯವನ್ನು ಹೊಂದಿರುವದು. ಈ ಅಣಬೆಯನ್ನು ಹೆಚ್ಚಿನ ಖರ್ಚಿಲ್ಲದೆ ಸುಲಭವಾಗಿ ಮನೆಯಲ್ಲಿಯೇ ಬೆಳೆಸಬಹುದು. ಈ ಜಾತಿ ಅಣಬೆಯ ಹೆಚ್ಚಿನ ಉಷ್ಣಾಂಶವಿರುವ(32-38ಂಸೆ.) ಪ್ರದೇಶಗಳಲ್ಲಿ ಬೆಳೆಸ ಬಹುದಾಗಿರುವುದರಿಂದ ಉತ್ತರ ಕರ್ನಾಟಕದಲ್ಲಿ ಬೆಳೆಯಲು ಸೂಕ್ತವಾಗಿರುತ್ತದೆ.
ಈ ಅಣಬೆಯ ವೈಶಿಷ್ಟತೆಗಳು
- ಈ ಬೆಳೆಯನ್ನು 70 ದಿವಸಗಳೊಳಗೆ ಪಡೆಯಬಹುದು.
- ಇದು ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿರುತ್ತದೆ (32-38ಂ¸.É)
- ವ್ಯವಸಾಯ ಮೂಲದಿಂದ ದೊರೆಯುವ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿಕೊಂಡು
ಬೆಳೆಯಬಹುದಾಗಿದೆ. ( ಭತ್ತದ ಹುಲ್ಲು, ಅಡಿಕೆ ಸಿಪ್ಪೆ ಕಬ್ಬಿನ ಸಿಪ್ಪೆ ಇತ್ಯಾದಿ). - ಈ ಅಣಬೆಯು ಇತರೆ ಅಣಬೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕವನ್ನು (17.2%) ಹೊಂದಿರುವುದಲ್ಲದೆ,
12 ಪ್ರಮುಖ ಅಮೈನೋ ಅಸಿಡ್ಗಳನ್ನು ಹೊಂದಿದೆ.
ಉತ್ಪಾದನಾ ಕ್ರಮ:
• ಈ ಅಣಬೆಯನ್ನು ಭತ್ತದ ಹುಲ್ಲಿನ ಮೇಲೆ ಚಿಪ್ಪು ಅಣಬೆ ಬೆಳೆಸುವ ರೀತಿಯಲ್ಲಿಯೇ ಬೆಳಸಬಹುದು.
• 1 ರಿಂದ 2 ಕೆ.ಜಿ. ಒಣ ಭತ್ತದ ಹುಲ್ಲನ್ನು ತೆಗೆದುಕೊಂಡು 2 ರಿಂದ 3 ಅಂಗುಲ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
• ಈ ರೀತಿ ಕತ್ತರಿಸಿದ ಹುಲ್ಲನ್ನು ಸ್ವಚ್ಚವಾದ ತಣ್ಣೀರಿನಲ್ಲಿ 8 ರಿಂದ 10 ಘಂಟೆಗಳ ಕಾಲ ನೆನೆಸಬೇಕು.
• ನೆನೆ ಹಾಕಿದ ನೀರನ್ನು ಬಸಿದು ಕೊಂಡುಮತ್ತೆ ಈ ಹುಲ್ಲನ್ನು ಕುದಿಯುವ ನೀರಿನಲ್ಲಿ ಅರ್ಧ ಘಂಟೆಕಾಲ ನೆನೆಸಿ ಬಸಿಯಬೇಕು. ಹುಲ್ಲು ಅಧಿಕ ನೀರನ್ನು ಹಿಡಿದಿದ್ದರೆ, ಸ್ವಚ್ಚವಾದ ಕಬ್ಬಿಣದ ಜರಡಿಮೇಲೆ ಹುಲ್ಲನ್ನು ಹರಡಿದರೆ ಸ್ವಲ್ಪ ವೇಳೆಯಲ್ಲಿ ನೀರು ಹೊರಬರುತ್ತದೆ.
• 12 ರಿಂದ 18 ಅಥವಾ ಅಂಗುಲ 14 ರಿಂದ 24 ಅಂಗುಲ ಅಳತೆ ಪಾಲಿಥೀನ್ ಚೀಲದಲ್ಲಿ ಕೆಲವು ರಂದ್ರಗಳನ್ನು ಮಾಡಿ ನಂತರ ಹುಲ್ಲನ್ನು 4 ಅಂಗುಲಗಳ ಎತ್ತರಕ್ಕೆ ತುಂಬಬೇಕು. ನಂತರ ಅರ್ಧ ಹಿಡಿಯಷ್ಟು ಮಿಲ್ಕಿ ಅಣಬೆ ಬೀಜವನ್ನು ಹುಲ್ಲಿನ ಅಂಚಿನ ಸುತ್ತ ಅಥವಾ ಮಧ್ಯ ಭಾಗದಲ್ಲಿ ಹರಡಬೇಕು. ಪುನ: 4 ಅಂಗುಲ ಎತ್ತರಕ್ಕೆ ಸಿದ್ದಪಡಿಸಿದ ಹುಲ್ಲನ್ನು ತುಂಬಿ ಅಣಬೆ ಬೀಜವನ್ನು ಮೇಲೆ ತಿಳಿಸಿದ ಕ್ರಮದಲ್ಲಿ ಹರಡಬೇಕು. ಈ ರೀತಿ ಚೀಲದಲ್ಲಿ 4 ಅಥವಾ 5 ಹಂತದಲ್ಲಿ ಹುಲ್ಲನ್ನು ತುಂಬಬೇಕು.
• ಒಂದು ಬಾಟಲಿ/ಪ್ಯಾಕೆಟ್ ನಲ್ಲಿರುವ ಬೀಜವು ಪ್ರತಿ ಚೀಲದಲ್ಲೂ 2.5 ಕೆ.ಜಿ. ಭತ್ತದ ಹುಲ್ಲಿರುವ ಸುಮಾರು 2 ಪಾಲಿಥೀನ್ ಚೀಲಗಳಿಗೆ ಸಾಕಾಗುತ್ತದೆ.
• ಈ ರೀತಿ ತುಂಬಿದ ನಂತರ ಚೀಲದ ಬಾಯನ್ನು ಕಟ್ಟಿ ದಿನಾಂಕ ಗುರುತಿಸಿ ಸ್ವಚ್ಛವಾದ ಸ್ಥಳದಲ್ಲಿ ಇಡುವುದು. ಈ ಚೀಲಗಳನ್ನು ಇಡುವ ಕೊಠಡಿಯಲ್ಲ 32ಂ ಯಿಂದ 28ಂ ಉಷ್ಣಾಂಶವಿರುವ ಹಾಗೆ ನೋಡಿಕೊಳ್ಳಬೇಕು. ಈ ವಾತಾವರಣದಲ್ಲಿ 18-20 ದಿವಸಗಳು ಅಲುಗಾಡಿಸದೆ ಇಡಬೇಕು. ಈ ಅವಧಿಯಲ್ಲಿ ಅಣಬೆ ಬೀಜವು ಚೀಲದೊಳಗೆ ಬೆಳೆಯುತ್ತದೆ.
• 18 ರಿಂದ 20 ದಿವಸಗಳ ನಂತರ ಚೀಲದ ಬಾಯನ್ನು ತೆರೆದು ಚೀಲದ ಮೇಲ್ಬಾಗವನ್ನು ಹುಲ್ಲಿನ ಮೇಲ್ಪದರ ಕಾಣಿಸುವವರೆಗೆ ಸುತ್ತಿ ಇಡುವುದು. ಈ ರೀತಿ ತೆರೆದ ಹುಲ್ಲಿನ ಕಂತೆಯ ಮೇಲೆ ಪಾಶ್ಚರೀಕರಿಸಿದ ಕೇಸಿಂಗ್ ವಸ್ತುವನ್ನು 2 ರಿಂದ 4 ಸೆಂ.ಮೀ. ದಪ್ಪವಾಗಿ ಹರಡಿ ಕೊಠಡಿಯಲ್ಲಿ ಇಡಬೇಕು.
• ಈ ಕೇಸಿಂಗ್ ವಸ್ತುವಿನ ಮೇಲೆ ಎರಡು ದಿನಗಳಿಗೊಮ್ಮೆ ತಣ್ಣೀರನ್ನು ಸಿಂಪಡಿಸಬೇಕು.
• ಕೇಸಿಂಗ್ ಮಾಡಿದ 15 ರಿಂದ 20 ದಿನಗಳ ನಂತರ ಅಣಬೆ ಮೊಗ್ಗುಗಳು ಬರಲು ಪ್ರಾರಂಭವಾಗಿ ಕೇಸಿಂಗ್ ಮಾಡಿದ 3-4 ವಾರಗಳಲ್ಲಿ ಪೂರ್ಣ ಬೆಳೆದು ಕೊಯ್ಲಿಗೆ ಸಿದ್ದವಾಗುತ್ತದೆ. ಕೊಯ್ಲಿಗೆ ಬಂದಿರುವ ಅಣಬೆಯನ್ನು ಮಾತ್ರ ಪಕ್ಕದಲ್ಲಿರುವ ಇತರೆ ಚಿಕ್ಕ ಅಣಬೆಗಳಿಗೆ ತೊಂದರೆಯಾಗದಂತೆ ಕೊಯ್ಲು ಮಾಡಬೇಕು. ಕೊಯ್ಲಾದ ಜಾಗಕ್ಕೆ ಪಾಶ್ಚರೀಕರಿಸಿದ ಕೇಸಿಂಗ್ ಪುಡಿಯನ್ನು ಮತ್ತೆ ತೆಳುವಾಗಿ ತುಂಬುವುದು.
• ಈ ರೀತಿ ಸುಮಾರು ಒಂದು ತಿಂಗಳವರೆಗೆ ಬೆಳೆ ಬರುತ್ತದೆ. ಬೀಜ ಹಾಕಿದ 70ರಿಂದ 75 ದಿವಸಗಳೊಳಗೆ ಪೂರ್ಣ ಬೆಳೆ ಬರುತ್ತದೆ. ಬೆಳೆ ಬರುವ ಸಮಯದಲ್ಲಿ ಉಷ್ಣಾಂಶವು 30 ಡಿಗ್ರಿ ಗಿಂತ ಕಡಿಮೆಯಾದಲ್ಲಿ ಹೀಟರ್ ಮೂಲಕ ಉಷ್ಣಾಂಶವನ್ನು 35ಂ ಸೆ. ವರೆವಿಗೆ ಹೆಚ್ಚಿಸಬೇಕು. ಚಳಿಗಾಲದಲ್ಲಿ ಈ ಬೆಳೆಯನ್ನು ತೆಗೆದುಕೊಳ್ಳದಿರುವುದು ಸೂಕ್ತ.
• ಒಂದು ಚೀಲದಿಂದ 500-600 ಗ್ರಾಂವರೆಗೆ ಅಣಬೆಯನ್ನು ಪಡೆಯಬಹುದು.
ಕೇಸಿಂಗ್ ವಸ್ತುವಿನ ವಿವರ:
ಕೆಂಪು ಮಣ್ಣು: ಮರಳು ಮತ್ತು ಚಾಕ್ ಅಥವಾ ಸುಣ್ಣದ ಪುಡಿ-1:1 ಮತ್ತು ಶೇ 10 ಪ್ರಮಾಣ ಮೇಲೆ ತಿಳಿಸಿರುವ ವಸ್ತುಗಳನ್ನು ನಮೂದಿಸಿರುವ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಪಾಶ್ಚರೀಕರಿಸಿ ನಂತರ ಉಪಯೋಗಿಸಬೇಕು. ಅಲ್ಲದೆ ಈ ಕೇಸಿಂಗ್ ವಸ್ತುವಿನ ರಸಸಾರವು 7 ರಿಂದ 7.5 ಇರಬೇಕು ವ್ಯತ್ಯಾಸವಿದ್ದಲ್ಲಿ ಸುಣ್ಣ ಅಥವಾ ಚಾಕ್ ಪುಡಿಯನ್ನು ಉಪಯೋಗಿಸಿ ಸರಿತೊಗಿಸಬೇಕು.
ವಿಶೇಷ ಸೂಚನೆ:
ಉತ್ಪಾದನೆಯಲ್ಲಿ ಮುಖ್ಯವಾಗಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಬೆಳೆಯುವ ಕೊಠಡಿಯಲ್ಲಿ ಬೆಳೆಯಿಡುವ ಮುನ್ನ ಶೇಕಡ 2 ರ ಫಾರ್ಮಲಿನ್ ದ್ರಾವಣವನ್ನು ಸಿಂಪಡಿಸಿ ಸ್ವಚ್ಚಗೊಳಿಸಬೇಕು.
ಮಿಲ್ಕಿ ಅಣಬೆಯಿಂದ ತಯಾರಿಸಬಹುದಾದ ರುಚಿಕರ ಪದಾರ್ಥಗಳು:
- ಅಣಬೆ ಸಾರು, 2. ಅಣಬೆ ಬಿರಿಯಾನಿ, 3. ಅಣಬೆ ಸೂಪ್, 4. ಅಣಬೆ ಬಾತ್, 5. ಅಣಬೆ ಉಪ್ಪಿನಕಾಯಿ, 6. ಅಣಬೆ ಮತ್ತು ಕೋಳಿ ಬಿರಿಯಾನಿ, 7. ಅಣಬೆ ಮತ್ತು ಇತರ ತರಕಾರಿ ಪ್ಲಯ ಇತ್ಯಾದಿ.
ತಾಂತ್ರಿಕ ಮಾಹಿತಿ: ಡಾ|| ಎಮ್, ಎಸ್, ನಂದೀಶ್, ಸಹಾಯಕ ಪ್ರಾಧ್ಯಾಪಕರು, ಡಾ|| ಆರ್ ಸಿ. ಜಗದೀಶ್ ಮತ್ತು ಡಾ||ಶಿವಲೀಲಾ ಪಾಟೀಲ
ಕೃಷಿ ಮಹಾವಿದ್ಯಾಲಯ,
ಕೃಷಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗ,
ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ.
7676664174