ಉದ್ಯೋಗದಲ್ಲಿ ಕೌಶಲ್ಯವನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ : ಎಡಿಸಿ

ಶಿವಮೊಗ್ಗ, ಆಗಸ್ಟ್ 26:
ಯಾವುದೇ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಬಹಳ ಮುಖ್ಯವಾಗುತ್ತದೆ. ನಾವೆಲ್ಲವರೂ ಒಂದೊಂದು ವಿಭಿನ್ನ ಕೌಶಲ್ಯವನ್ನು ಹೊಂದಿದ್ದು, ಆ ಕೌಶಲ್ಯಕ್ಕೆ ಚುರುಕು ನೀಡಿ, ಶ್ರಮ ವಹಿಸಿ ಬದ್ದತೆಯಿಂದ ಅದರಲ್ಲೇ ಮುಂದುವರೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ತಿಳಿಸಿದರು.
ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಿನಿ ಉದ್ಯೋಗ ಮೇಲ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಮೇಳಗಳಿಂದ ಯುವಜನತೆಗೆ ಬಹಳ ಅನುಕೂಲವಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಮುಕ್ತವಾಗಿ ಯುವಜನ ಮೇಳ ಹಮ್ಮಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಕೋವಿಡ್ ಇಳಿಮುಖವಾಗಿರುವುದರಿಂದ ಕೋವಿಡ್ ನಿಯಮಾವಳಿಗಳ ಅನುಸರಣೆ ಷರತ್ತಿಗೊಳಪಟ್ಟು ಆಯೋಜನೆ ಮಾಡಿರುವುದು ಸ್ವಾಗತಾರ್ಹ. ಕೋವಿಡ್ ಕಾರಣದಿಂದ ದೇಶದಲ್ಲಿ ಸಾಕಷ್ಟು ಆರ್ಥಿಕ ಹಿನ್ನಡೆಯಾಗಿದೆ. ಆರ್ಥಿಕತೆಯನ್ನು ಸಬಲಗೊಳಿಸಲು ಎಲ್ಲರ ಶ್ರಮ ಅಗತ್ಯವಾಗಿದ್ದು, ಈಗ ಆರ್ಥಿಕ ಚಟುವಟಿಕೆಗಳು ಸ್ವಲ್ಪ ಚೇತರಿಕೆ ಕಾಣುತ್ತಿವೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಇಲಾಖೆ ವತಿಯಿಂದ ಸಾಕಷ್ಟು ಕೌಶಲ್ಯಗಳಲ್ಲಿ ತರಬೇತಿಗಳು, ಉದ್ಯೋಗಾವಕಾಶಗಳು ಲಭ್ಯವಿದ್ದು ಅದರ ಪ್ರಯೋಜನವನ್ನು ಯುವಜನತೆ ಪಡೆಯಬೇಕು.
ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ಓದು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯ ಗುರುತಿಸಿ ಉದ್ಯೋಗ ಮಾಡುತ್ತಲೇ ಓದನ್ನು ಮುಂದುವರೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಕೇವಲ ಸುಖ ಬೇಕೆಂದು ನಿರೀಕ್ಷಿಸಿದರೆ ಮುಂದಿನ ಜೀವನ ಕಷ್ಟ ಪಡಬೇಕಾಗುತ್ತದೆ. ಆದ ಕಾರಣ ವಿದ್ಯಾರ್ಥಿ ದೆಸೆಯಲ್ಲಿ ಶ್ರಮ ವಹಿಸಿ ಬದ್ದತೆಯಿಂದ ಓದಿದಲ್ಲಿ ಯಶಸ್ಸು ಸಾಧ್ಯ ಎಂದ ಅವರು ಕೌಶಲ್ಯ ಎನ್ನುವುದು ನಿಂತ ನೀರಲ್ಲ. ಅದನ್ನು ಕಾಲಕಾಲಕ್ಕೆ ಬದ್ದತೆಯಿಂದ ಅಪ್‍ಡೇಟ್ ಮಾಡಿಕೊಳ್ಳಬೇಕು ಎಂದರು.
ಅವಕಾಶಗಳನ್ನು ಬಳಸಿಕೊಂಡು ಸಾಮಥ್ರ್ಯವನ್ನು ವೃದ್ದಿಸಿಕೊಂಡು ಅನುಭವ ಪಡೆಯುತ್ತಾ ಸಾಗಿದಲ್ಲಿ ಮುಂದೆ ನೀವು ನೂರು ಜನರಿಗೆ ಕೆಲಸ ನೀಡುವಂತೆ ಆಗಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಇಂತಹ ಉದ್ಯೋಗ ಮೇಳಗಳು ಯುವಜನತೆಯ ಜೀವನಕ್ಕೆ ಒಂದು ದಾರಿಯಾಗಿದೆ. ಇಂದು ನಾವು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅದೇನೆಂದರೆ, ಪ್ರಸ್ತುತದಲ್ಲಿ ಉದ್ಯೋಗಾವಕಾಶಗಳು ಇವೆ, ಆಕಾಂಕ್ಷಿಗಳೂ ಇದ್ದಾರೆ ಆದರೆ ಅದಕ್ಕೆ ತಕ್ಕನಾದ ಕೌಶಲ್ಯದ ಕೊರತೆಯಿಂದ ಉದ್ಯೋಗಾವಕಾಶಗಳು ಸದ್ಬಳಕೆ ಆಗುತ್ತಿಲ್ಲ. ಉದ್ಯೋಗದಲ್ಲಿ ಉತ್ತಮ ಸಾಮಥ್ರ್ಯ ಬೇಕೆಂದರೆ ಕೌಶಲ್ಯ ಅಗತ್ಯವಾಗಿ ಬೇಕು. ಆದ ಕಾರಣ ಪ್ರತಿಯೊಬ್ಬರೂ ಕೌಶಲ್ಯಾಭಿವೃದ್ದಿಗೆ ಒತ್ತು ನೀಡಬೇಕು.
ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮನೆಯಲ್ಲಿಯೇ ಕುಳಿತು ಕೌಶಲ್ಯ ಪಡೆಯುವ, ಕೆಲಸ ಮಾಡುವ ಅನೇಕ ಅವಕಾಶಗಳಿವೆ. ಒಬ್ಬರಲ್ಲೇ ವಿವಿಧ ಕೌಶಲ್ಯ ಬೇಡುವ ಕೆಲಸಗಳು ಇಂದು ಇದ್ದು, ಅದಕ್ಕೆ ತಯಾರಾಗಬೇಕು. ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಇಲಾಖೆಯಿಂದ ಸಹ ಸಾಕಷ್ಟು ಸೌಲಭ್ಯಗಳು ಇದ್ದು ಅದರ ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ಹಾರೈಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸುದೇವ ಮಾತನಾಡಿ, ತಮ್ಮ ಜೀವನಾನುಭವವನ್ನೇ ಹಂಚಿಕೊಂಡು, ಯುವಜನತೆ ತಮ್ಮ ಉದ್ಯೋಗದ ಬಗ್ಗೆ ಕನಸು ಕಟ್ಟಬೇಕು. ತಾವೂ ಸಹ ಬಡ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ, ಬೆಳೆದು ಚಿಕ್ಕ ವಯಸ್ಸಿನಲ್ಲಿಯೇ ಇಂತಹದ್ದೇ ಉದ್ಯೋಗದಲ್ಲಿ ಉನ್ನತಿ ಪಡೆಯಬೇಕೆಂದು ಕನಸು ಕಟ್ಟಿದ್ದು, ಆ ನಿಟ್ಟಿನಲ್ಲಿಯೇ ಔದ್ಯೋಗಿಕವಾಗಿ ಯಶಸ್ವಿಯಾದ ಬಗ್ಗೆ ತಿಳಿಸಿದ ಅವರು ತಮ್ಮಲ್ಲಿರುವ ಒಂದು ಕೌಶಲ್ಯವನ್ನು ಗುರುತಿಸಿ, ಅದರಲ್ಲಿ ತರಬೇತಿ ಹೊಂದಿ ಮುಂದೆ ಬರಬೇಕು. ಉದ್ಯೋಗಾವಕಶಾಗಳಿಗೆ ಇಂದು ಕೊರತೆ ಇಲ್ಲ. ಆದರೆ ಕೌಶಲ್ಯದ ಕೊರತೆ ಇದೆ. ಹಾಗಾಗಿ ತಮ್ಮಲ್ಲಿನ ಕೌಶಲ್ಯ ವೃದ್ದಿಸಿಕೊಳ್ಳಬೇಕು. ಜೊತೆಗೆ ಒಂದು ಸಂಸ್ಥೆಗೆ ಸೇರಿ ಇಂತಿಷ್ಟು ವೇತನ ಬೇಕೆಂದು ನಿರೀಕ್ಷಿಸುವ ನಾವು ಆ ಸಂಸ್ಥೆಗೆ ಉತ್ತಮವಾದದ್ದನ್ನು ಕೊಡಬೇಕೆಂದು ಸಂಕಲ್ಪ ಮಾಡಬೇಕು ಎಂದರು.
ಮಹಿಳಾ ಉದ್ಯಮಿಗಳಾಗಲು ಸರ್ಕಾರ ಅನೇಕ ಅವಕಾಶಗಳನ್ನು ನೀಡಿದ್ದು, ಮಹಿಳೆಯರು ಮುಂದೆ ಬರಬೇಕು. ಹಾಗೂ ಮಹಿಳೆಯರು ಕೆಲವೇ ಕೆಲಸಗಳಿಗೆ ಸೀಮಿತವಾಗದೇ ಮಾರುಕಟ್ಟೆ ವ್ಯವಸ್ಥೆಗೂ ಹೆಜ್ಜೆ ಇಡಬೇಕೆಂದು ಆಶಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ಮಾತನಾಡಿ, ಹಿಂದೆ ಜ್ಞಾನಕ್ಕೆ ಬಹಳ ಮಹತ್ವ ಇತ್ತು. ಆದರೆ ಇಂದು ಜ್ಞಾನದೊಂದಿಗೆ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ಇದ್ದು, ನಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿಕೊಂಡು ಆ ನಿಟ್ಟಿನಲ್ಲಿ ತರಬೇತಿ ಹೊಂದಿ ಅಭಿವೃದ್ದಿಪಡಿಸಿಕೊಂಡಲ್ಲಿ ಯಾರಿಗೂ ಉದ್ಯೋಗಾವಕಾಶ ಕೊರತೆ ಕಾಡುವುದಿಲ್ಲ. ಇಂದಿನ ಮಿನಿ ಉದ್ಯೋಗ ಮೇಳದಲ್ಲಿ ಬಹುತೇಕ ಸ್ಥಳೀಯವಾದ 25 ಉದ್ಯೋಗದಾತ ಕಂಪೆನಿಗಳು ಭಾಗವಹಿಸಿದ್ದು, 7 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗುವುದು. ಸುಮಾರು 800 ಜನರಿಗೆ ಉದ್ಯೋಗಾವಕಾಶ ನೀಡುವ ಅವಕಾಶ ಇದ್ದು ಸುಮಾರು 2 ಸಾವಿರ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ ಅವರು ಸರ್ಕಾರದ ಕೌಶಲ್ಯ ತರಬೇತಿಗಳ ಮಾಹಿತಿ ಪಡೆದು ಉಪಯೋಗ ಪಡೆಯುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಸ್.ನಾಗಭೂಷಣ್, ಕೌಶಲ್ಯಾಭಿವೃದ್ದಿ ಇಲಾಖೆ ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ನಾಯಕ್ ಸ್ವಾಗತಿಸಿದರು. ಸಮನ್ವಯ ಕಾಶಿ ನಿರೂಪಿಸಿದರು.

error: Content is protected !!