ಶಿವಮೊಗ್ಗ, ಮೇ. 31 : ಜಿಲ್ಲೆಯ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮಂಡಳಿ ಬೆಂಗಳೂರು ಇವರ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 2019-20 ನೇ ಸಾಲಿನ ಮಾವು, ಹಲಸು, ಜೇನು ಮತ್ತು ಸಾವಯುವ ಮೇಳವನ್ನು ಜೂನ್ 7 ರಿಂದ 9ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಹಾಗೂ ಗಾಂಧಿ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಸ್ಥಳಿಯ ಹಾಗೂ ರಾಜ್ಯದ ವಿವಿಧೆಡೆಯಲ್ಲಿ ರೈತರು ಬೆಳೆದ ಹಲಸು, ಮಾವುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ಕಸಿ ಮಾಡಿರುವ ಮಾವು ಹಾಗೂ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಸಹ ಇರುತ್ತದೆ. ಇಲ್ಲಿ ಮಾರಾಟವಾಗುವ ಕೃಷಿ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು, ಸಾವಯುವ ರೀತಿಯಲ್ಲಿ ಬೆಳೆದ ಉತ್ಪನ್ನಗಳು ಹಾಗೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳಾಗಿರುತ್ತವೆ. ಇದರೊಂದಿಗೆ ಜೇನು ಸಾಕಾಣಿಕೆ ಹಾಗೂ ಸಾವಯುವ ಕೃಷಿ ಕುರಿತಾದ ತರಬೇತಿ ಹಾಗೂ ಮಾಹಿತಿಗಳನ್ನು ನೀಡಲಾಗುತ್ತದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.