ಶಿವಮೊಗ್ಗ, ಡಿಸೆಂಬರ್ 19 – ಜಿಲ್ಲೆಯಲ್ಲಿನ ಮಾವು, ಗೇರು ಮುಂತಾದ ತೋಟಗಾರಿಕೆ ಬೆಳೆಗಳಿಗೆ ತೊಂದರೆ ನೀಡುತ್ತಿರುವ ಹುಳುಗಳ ನಿವಾರಣೆ ಹಾಗೂ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ.
ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲುಗಳನ್ನು ಚೂಪಾದ ಕೊಂಬಿನಿದ ಚುಚ್ಚಿ ರಸ ಹೀರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 25 ರಿಂದ 75 ರಷ್ಟು ಫಸಲು ನಷ್ಟವಾಗುವುದು. ರೈತರು ಈ ಹಂತದಿಂದಲೇ ಮುಂಜಾಗ್ರತಾ ಕ್ರಮವಾಗಿ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಹಾನಿಗಳನ್ನು ತಡೆಗಟ್ಟಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಮಾರ್ಗ ದರ್ಶನ ನೀಡಿದ್ದಾರೆ.
ಮಾವು ಮತ್ತು ಗೇರು ಗಿಡಗಳಲ್ಲಿ ಕಂಡುಬರುವ ಒಣಗಿದ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋರ್ಡೋ ಅಥವಾ ಕಾಪರ್ ಆಕ್ಸಿ ಕ್ಲೋರೈಡ್ ದ್ರಾವಣ ಹಚ್ಚಬೇಕು. ಬುಡದ ಸುತ್ತಲೂ ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು. ಗೇರು ಬೆಳೆಗೆ ನೀರಾವರಿ ಪ್ರಾರಂಭಿಸಬಹುದು. ಆದರೆ ಮಾವಿನ ಬೆಳೆಗೆ ಸಣ್ಣ ಮಿಡಿಗಾಯಿ ಬರುವ ಹಂತದವರೆಗೂ ನೀರಾವರಿ ಪ್ರಾರಂಭಿಸಬಾರದು.
ಮಾವಿನಲ್ಲಿ ಹೂ ಮೊಗ್ಗು ಹೊರಟ ನಂತರ ಹೂ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.7 ಮಿಲೀ. ಅಥವಾ ಕ್ಲೋರೋಪೈರಿಫಸ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರ ಜೊತೆಗೆ ಐ.ಐ.ಹೆಚ್.ಆರ್ ಮ್ಯಾಂಗೋ ಸ್ಪೆಷಲ್ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜಿಗಿ ಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್ 1 ಮಿ.ಲೀ. ಆಥವಾ ಇಮಿಡಾಕ್ಲೋಪ್ರಿಡ್ 3 ಮಿ.ಲೀ. ಅಥವಾ 0.5 ಮಿ.ಲೀ ಸೈಪರ್ ಮೆಥ್ರಿನ್ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕದ ಜೊತೆಗೆ ಕಾರ್ಬೆಂಡೆಜಿಯಂ 1 ಗ್ರಾಂ ಅಥವಾ ಮ್ಯಾಂಕೊಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 25-30 ದಿನಗಳಿಗೊಮ್ಮೆ ಅವಶ್ಯಕತೆಗನುಗುಣವಾಗಿ ಸಿಂಪಡಿಬೇಕು.
ಗೋಡಂಬಿ ಬೆಳೆಯಲ್ಲಿ ಟೀ ಸೊಳ್ಳೆ ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.75 ಮಿ.ಲೀ ಅಥವಾ ಲ್ಯಾಂಬ್ಡಸೈಲೋಥ್ರಿನ್ 1 ಮಿ.ಲೀ. ಆಥವಾ ಕ್ಲೋರೋಪೈರಿಪಾಸ್ 50 ಇ.ಸಿ. 1.5 ಮಿ .ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಡಿಸಬೇಕು. ರೈತರು ಈ ಇಲ್ಲಾ ಕ್ರಮಗಳನ್ನು ಕೈಗೋಳ್ಳುವುದರಿಂದ ಮಾವು ಮತ್ತು ಗೇರು ಬೆಳೆಗಳ ಉತ್ತಮ ನಿರ್ವಹಣೆ ಮಾಡುವಂತೆ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆ ನೀಡಿದೆ.