ಶಿವಮೊಗ್ಗ,:: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮಾರ್ಚ್ 09ರಂದು ವಿಶ್ವವಿದ್ಯಾಲಯದ ಆವರಣದಲ್ಲಿ 4ನೇ ಘಟಿಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ವಿವಿ ಕುಲಪತಿ ಡಾ|| ಎಂ.ಕೆ.ನಾಯಕ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಕಾರ್ಯಾಲಯದ ಸಭಾಂಗಣದಲ್ಲಿ ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಘಟಿಕೋತ್ಸವದಲ್ಲಿ 344 ಪದವೀಧರರು ವಿಶ್ವವಿದ್ಯಾಲಯದ ಪದವಿ ಪ್ರಮಾಣವನ್ನು ಸ್ವೀಕರಿಸಲಿದ್ದಾರೆ. ಇದರಲ್ಲಿ 278 ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಹಾಗೂ 66 ವಿದ್ಯಾರ್ಥಿಗಳು ಗೈರುಹಾಜರಿಯಲ್ಲಿ ಪದವಿಗಳನ್ನು ಪಡೆಯಲಿದ್ದಾರೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಪ್ರತಿಭಾನ್ವಿತ ಹಾಗೂ ರ್ಯಾಂಕ್ಗಳಿಸಿದ ಒಟ್ಟು 23 ವಿದ್ಯಾರ್ಥಿಗಳಿಗೆ 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ನಾಲ್ಕು ಮಹಾವಿದ್ಯಾಲಯಗಳ ಸ್ನಾತಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 1 ಚಿನ್ನದ ಪದಕ, ಅದೇ ರೀತಿ ಕೃಷಿ ಸ್ನಾತಕೋತ್ತರ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಸಕ್ತ ಸಾಲಿನ 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಸ್ನಾತಕೋತ್ತರ ತೋಟಗಾರಿಕೆ ವಿಭಾಗದಲ್ಲಿ 6 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಿದೆ. ಇದರ ಜೊತೆಯಲ್ಲಿ ಕೀಟ ಶಾಸ್ತ್ರ, ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ಸಸ್ಯರೋಗಶಾಸ್ತ್ರ ಹಾಗೂ ಮಣ್ಣುವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಚಿನ್ನದ ಪದಕ ನೀಡಿ ಗೌರವಿಸಲಿದೆ ಎಂದರು.
ವಿಶ್ವವಿದ್ಯಾಲಯದ ಚಿನ್ನದ ಪದಕದ ಜೊತೆಯಲ್ಲಿ ದಾನಿಗಳು ನೀಡಿದ ಚಿನ್ನದ ಪದಕಗಳನ್ನು ಕೂಡ ವಿಶ್ವವಿದ್ಯಾಲಯವು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಶ್ರೀಮತಿ ಆಶಾ ಶೇಷಾದ್ರಿ ಮತ್ತು ಕನ್ನಂಗಿ ಶೇಷಾದ್ರಿ ಚಿನ್ನದ ಪದಕ, ಶ್ರೀಮತಿ ಕಸ್ತೂರಿ ಶಿವಪ್ಪ ರೊಟ್ಟಿ ಮತ್ತು ಶ್ರೀಮತಿ ವಿಜಯಲಕ್ಷ್ಮಿಸತವೀರ್ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಡಾ|| ಬಿ. ಆರ್.ಅಂಬೇಡ್ಕರ್ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದವರು ನುಡಿದರು.
ಅಲ್ಲದೇ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಲೇಟ್ ಶ್ರೀಮತಿ ಕಾಂಚನ ಮಾಲಮ್ಮ ಮತ್ತು ಶ್ರೀ ಎನ್. ದಶರಥಯ್ಯ ಚಿನ್ನದ ಪದಕ, ಮಂಗಳೂರು ಕೆಮಿಕಲ್ಸ್ ಅಂಡ್
ಫರ್ಟಿಲೈಸರ್ಸ ಚಿನ್ನದ ಪದಕ ಮತ್ತು ಶ್ರೀಮತಿ ಮಂಜುಳ ಹರೀಶ್ ಬಾಬು ಚಿನ್ನದ ಪದಕ ಹಾಗೂ ಪ್ರತಿಭಾನ್ವಿತ ಎಸ್.ಸಿ ಎಸ್.ಟಿ ವಿದ್ಯಾರ್ಥಿಗೆ ಡಾ|| ಬಿ. ಆರ್.ಅಂಬೇಡ್ಕರ್ ಚಿನ್ನದ ಪದಕ ಹಾಗೂ ಕೃಷಿ ಅರಣ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಟಾಟಾಕಾಫಿ ಚಿನ್ನದ ಪದಕ ನೀಡಿ ಗೌರವಿಸಲಿದೆ. ಚಿನ್ನದ ಪದಕಗಳನ್ನು ಪಡೆಯುವ ಪದವೀಧರರಲ್ಲಿ 16 ಜನ ವಿದ್ಯಾರ್ಥಿನಿಯರು ಮತ್ತು 7 ಜನ ವಿದ್ಯಾರ್ಥಿಗಳು ಒಳಗೊಂಡಿರುವುದು ವಿಶೇಷ ಎಂದರು.
ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಕುಲಾಧಿಪತಿಗಳಾದ ಘನತೆವೆತ್ತ ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಾಜುಭಾಯಿ ವಾಲಾ ಅವರು ಅಧ್ಯಕ್ಷತೆ ವಹಿಸುವರು. ಸಹ ಕುಲಾಧಿಪತಿಗಳು ಹಾಗೂ ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿರವರು ಉಪಸ್ಥಿತರಿರುವರು. ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಕಾರ್ಯದರ್ಶಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಮಹಾನಿರ್ದೇಶ ಡಾ. ತ್ರಿಲೋಚನ ಮಹಾಪಾತ್ರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವದ ಪ್ರದಾನ ಭಾಷಣ ಮಾಡಲಿರುವರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಾಧನೆಗಳು :
ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯು ನಮ್ಮ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಇದರ ವ್ಯಾಪ್ತಿಯ ನಾಲ್ಕು ಮಹಾವಿದ್ಯಾಲಯಗಳನ್ನು 2016-17 ನೇ ಸಾಲಿನಲ್ಲಿ ಪರಿಗಣಿಸಿ, ನಾಲ್ಕು ವರ್ಷದೊಳಗೆ ಮಾನ್ಯತೆ ನೀಡಿರುತ್ತದೆ. ವಿಶ್ವವಿದ್ಯಾಲಯದ ವಿವಿಧ ಪದವಿ ಕಾರ್ಯಕ್ರಮಗಳಡಿಯಲ್ಲಿ 2018-19 ನೇ ಸಾಲಿನಲ್ಲ್ಲಿ ಒಟ್ಟು 421 ವಿದ್ಯಾರ್ಥಿಗಳು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಐ.ಸಿ.ಎ.ಆರ್, ಎನ್ಆರ್ಐ ಸ್ನಾತಕ ಪದವಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದಿದ್ದಾರೆ. ವಿಶ್ವವಿದ್ಯಾಲಯದ ವಿವಿಧ ಮಹಾವಿದ್ಯಾಲಯಗಳಿಂದ ಒಟ್ಟು 48 ವಿದ್ಯಾರ್ಥಿಗಳು ಐ.ಸಿ.ಎ.ಆರ್. ನಡೆಸಿದ ಜೆ.ಆರ್.ಎಫ್./ಎನ್.ಟಿ.ಎಸ್. ಫೆಲೋಶಿಪ್ ಪಡೆದಿರುತ್ತಾರೆ. ಅದರಲ್ಲಿ ಜೆ.ಆರ್.ಎಫ್.ನಲ್ಲಿ 20 ವಿದ್ಯಾರ್ಥಿಗಳು ಮತ್ತು ನಾನ್ ಜೆ.ಆರ್.ಎಫ್.ನಲ್ಲಿ 28 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರಿನ ವಿದ್ಯಾರ್ಥಿನಿ ಕು. ಚೈತ್ರ ಟಿ.ಎಸ್. ಜೆ.ಆರ್.ಎಫ್.ನಲ್ಲಿ ದ್ವಿತೀಯ ರ್ಯಾಂಕ್ ಮತ್ತು ಕೃಷಿ ಮಹಾವಿದ್ಯಾಲಯ, ಶಿವಮೊಗ್ಗದ ವಿದ್ಯಾರ್ಥಿ ಶ್ರೀ.ದಯಾನಂದ ಪಾಟೀಲ್ ಜೆ.ಆರ್.ಎಫ್.ನಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ.
ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಐಸಿಎಆರ್-ಸ್ನಾತಕೋತ್ತರ ಸ್ಕಾಲರ್ಶಿಫ್ಗಳಲ್ಲಿ ಅಖಿಲಭಾರತ ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಕ್ಕಾಗಿ ದಿನಾಂಕ 08.03.2018 ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೌರವಾನ್ವಿತ ಕೇಂದ್ರ ಕೃಷಿ ಸಚಿವರಾದ ಶ್ರೀ ರಾಧಾ ಮೋಹನ್ಸಿಂಗ್À ಅವರು ಐಸಿಎಆರ್-ಸ್ನಾತಕೋತ್ತರ ಸ್ಕಾಲರ್ಶಿಪ್ ಪ್ರಶಸ್ತಿ ಪ್ರದಾನ ಮಾಡಿದರು. ಅಖಿಲಭಾರತ ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವದಲ್ಲಿ ನಮ್ಮ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನದ ಪದಕ, 1 ಬೆಳ್ಳಿ ಪದಕ, 1 ಕಂಚು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮಹಿಳಾ ಡಿಸ್ಕಸ್ಥ್ರೋ ನಲ್ಲಿ ನಿಧಿ ಸಿ.ಎನ್ ಚಿನ್ನದ ಪದಕ, ಮಹಿಳಾ 400 ಮೀಟರ್ ಓಟದಲ್ಲಿ ದಿವ್ಯಾ ಎಸ್. ಬೆಳ್ಳಿ ಪದಕ ಹಾಗೂ ಪುರುಷರ 800 ಮೀಟರ್ ಓಟದಲ್ಲಿ ಲಿಂಗರಾಜ ಎಸ್ ಕಂಚಿನ ಪದಕ ಗಳಿಸಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಲ್ಲಾ ಗ್ರಂಥಾಲಯಗಳನ್ನು, ಸಂಪೂರ್ಣವಾಗಿ ತಾಂತ್ರಿಕರಿಸಿದ್ದು ಆರ್ಎಫ್ಐಡಿ & ಕೋಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ 2018 ಆಗಸ್ಟ್ 10ರಂದು ನವದೆಹಲಿಯಲ್ಲಿ ಜರುಗಿದ ಕೃಷಿ ಬೆಳೆಗಳ ತಳಿಗಳ ಸೂಚನೆಗಳ ಪ್ರಕಟಣೆ ಮತ್ತು ಬಿಡುಗಡೆಯ ಕೇಂದ್ರ ಉಪಸಮಿತಿಯ 80ನೇ ಸಭೆಯಲ್ಲಿ ನಮ್ಮ ವಿಶ್ವವಿದ್ಯಾಲಯದಿಂದ ಬಿಡುಗಡೆಗೆ ಶಿಫಾರಸ್ಸು ಮಾಡಿರುವ ಕೆ.ಎಚ್.ಪಿ-13 (Iಇಖಿ-21479) ಗುಡ್ಡಗಾಡು ಪ್ರದೇಶಕ್ಕೆ ಮತ್ತು ಕೆ.ಕೆ.ಪಿ-5 (Iಇಖಿ-24250) ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ತವಾದ ಭತ್ತದ ತಳಿಗಳನ್ನು ಅಧಿಸೂಚನೆಗಾಗಿ ಶಿಫಾರಸ್ಸು ಮಾಡಲಾಗಿದೆ ಹಾಗೂ ಮೆಕ್ಕೆಜೋಳ ಸಂಕರಣ ತಳಿ ಒಂಊ-14-5ನ್ನು ಅರೆಮಲೆನಾಡು ವಲಯಕ್ಕೆ ಈ ಸಮಿತಿಯಲ್ಲಿ ಅನುಮೋದಿಸಲಾಗಿದೆ. ನಮ್ಮ ವಿಶ್ವವಿದ್ಯಾಲಯದ ಸಸ್ಯ ತಳಿ ವಿಭಾಗವು ನವದೆಹಲಿಯಲ್ಲಿರುವ ಭಾರತ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಶಿವಮೊಗ್ಗದ ವಿಭಾಗೀಯ ಕಛೇರಿಯಿಂದ ಈ ಕೆಳಗಿನ
4 ಭತ್ತದ ತಳಿಗಳನ್ನು ತುಂಗಾ (Iಇಖಿ-13901), ಕೆ.ಎಚ್.ಪಿ-9(Iಇಖಿ-17967) ಕೆ.ಎಚ್.ಪಿ-10 (Iಇಖಿ-7991) ಕೆ.ಎಚ್.ಪಿ-13 (Iಇಖಿ 21479) ನೋಂದಣಿಗೆ ಶಿಫಾರಸ್ಸು ಮಾಡಲಾಗಿದೆ. ಕರಾವಳಿ ವಲಯಕ್ಕೆ ಸೂಕ್ತವಾದ ಭತ್ತದ ತಳಿ ಒಔ-21 (Pಡಿಚಿgಚಿಣi) ಸುಗ್ಗಿ ಮತ್ತು ಕೊಳಕೆ ಎರಡು ಕಾಲಗಳಲ್ಲಿ ಬೆಳೆಯಬಹುದಾದ ಮಜಲು ಮತ್ತು ಬೆಟ್ಟ ಪ್ರದೇಶಕ್ಕೆ ಶಿಫಾರಸ್ಸು ಮಾಡಲಾಗಿದೆ.
ತಳಿ ಅಭಿವೃದ್ಧಿ, ಬೆಳೆ ಉತ್ಪಾದನೆ, ಸಸ್ಯಸಂರಕ್ಷಣೆ, ಯಾಂತ್ರೀಕೃತ ಬೇಸಾಯ, ಮೀನು ಸಾಕಾಣಿಕೆ ಮತ್ತು ತೋಟಗಾರಿಕೆಯಲ್ಲಿ 20ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಮತ್ತು
12 ತಾಂತ್ರಿಕತೆಗಳನ್ನು ರೈತರ ಹೊಲದಲ್ಲಿ ಕ್ಷೇತ್ರ ಪ್ರಯೋಗ ಮಾಡಲು ಶಿಫಾರಸ್ಸು ಮಾಡಲಾಗಿದೆ. 2017 ರಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹಿರಿಯೂರಿನಲ್ಲಿ, ಅಭಿವೃದ್ಧಿಪಡಿಸಿದ ಮಿನಿ ಕೈಚಾಲಿತ ಶೇಂಗಾ ಸಿಪ್ಪೆ ಸುಲಿಯುವ ಯಂತ್ರಕ್ಕೆ ಭಾರತ ಸರ್ಕಾರಕ್ಕೆ ಹಕ್ಕು ಸ್ವಾಮ್ಯವನ್ನು ನೀಡಲು ಸಲ್ಲಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸುಮಾರು 7114.17 ಲಕ್ಷಗಳ ಅನುದಾನ ದೊರೆತಿದ್ದು 431 ಯೋಜನೆಗಳು ಅನುಷ್ಠ್ಟಾನದಲ್ಲಿವೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ (ಸಂಶೋಧನೆ ಮತ್ತು ಅಭಿವೃದ್ಧಿ), ಸುಜಲಾ ಜಲಾನಯನ ಯೋಜನೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ (ಯೋಜನಾ ಅನುದಾನ) ಹಾಗು ಹೊಸ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಈ 431ಯೋಜನೆಗಳಲ್ಲಿ 98 ಹೊಸ ಯೋಜನೆಗಳಾಗಿದ್ದು 333ಮುಂದುವರಿದ ಯೋಜನೆಗಳಾಗಿರುತ್ತವೆ.
2018-19 ನೇ ಸಾಲಿನ ಕರ್ನಾಟಕ ಸರ್ಕಾರದ ಯೋಜನೆ ಅನುದಾನ ಹೊಸ ಕಾರ್ಯಕ್ರಮದಡಿಯಲ್ಲಿ
21 ಹೊಸ ಯೋಜನೆಗಳು ಮತ್ತು 16 ಮುಂದುವರಿದ ಯೋಜನೆಗಳು ಚಾಲ್ತಿಯಲ್ಲಿವೆ. ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಮೂರು ಉತ್ಕøಷ್ಠತಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪೀಡೆನಾಶಕಗಳ ಉಳಿಕೆ ಪರೀಕ್ಷಾ ಪ್ರಯೋಗಾಲಯ, 2. ಸಸ್ಯರೋಗಗಳು ಮತ್ತು ಪೀಡೆಗಳ ಚಿಕಿತ್ಸಾ ಶ್ರೇಷ್ಠತಾ ಕೇಂದ್ರ 3.ಕೃಷಿ ಹವಾಮಾನ ವೈಪರೀತ್ಯ ಚೇತರಿಕಾ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೈತರನ್ನು ಪ್ರೋತ್ಸಾಹಿಸಲು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯನ್ನು ಆರಂಭಿಸಲಾಗಿದೆ.
ರೂ. 335.69 ಲಕ್ಷಗಳ ಒಟ್ಟು ಬಜೆಟ್ ವೆಚ್ಚದೊಂದಿಗೆ ಕರ್ನಾಟಕದ ಮೂರು ವಲಯಗಳನ್ನು (ಕೇಂದ್ರ ಒಣವಲಯ, ದಕ್ಷಿಣ ಉಷ್ಣ ವಲಯ ಮತ್ತು ಕರಾವಳಿ ವಲಯ) ಒಳಗೊಂಡ 6000 ಹೆಕ್ಟೇರ್ ಕ್ಷೇತ್ರದಲ್ಲಿ ಈ ಯೋಜನೆಯನ್ನು ವಿಶ್ವವಿದ್ಯಾಲಯವು ನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯದ ಬೀಜ ಘಟಕ, ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಮತ್ತು ಸಸ್ಯೋತ್ಪಾದನೆ ಕಾರ್ಯಕ್ರಮಗಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 10074.12 ಕ್ವಿಂಟಾಲ್ಗಳಷ್ಟು ಬೀಜೋತ್ಪಾದನೆ ಮಾಡಲಾಗಿದೆ. ಅವುಗಳಲ್ಲಿ ಧಾನ್ಯಗಳು (7338.29), ದ್ವಿದಳ ಧಾನ್ಯಗಳು (2403.02), ಎಣ್ಣೆಕಾಳುಗಳ (332.80) ಉತ್ಪಾದನೆ ಒಳಗೊಂಡಿರುತ್ತದೆ ಹಾಗೂ 2018-19 ನೇ ಸಾಲಿನಲ್ಲಿ 29,375 ಕ್ವಿಂಟಾಲ್ಗಳಷ್ಟು ಬೀಜೋತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸುಮಾರು 9,03,659 ಗುಣಮಟ್ಟದ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಉತ್ಪಾದನೆ ಮಾಡಿದ್ದು, ಮುಂದಿನ ವರ್ಷದಲ್ಲಿ ಸುಮಾರು 16,61,500 ಮಾಡುವ ಗುರಿಯನ್ನು ಹೊಂದಲಾಗಿದೆ. ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಿಂದ ಸುಮಾರು 176.27 ಕ್ವಿಂಟಾಲ್ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಸೂಕ್ಷ್ಮಾಣುಗಳನ್ನು ಉತ್ಪಾದಿಸಿ ಮಾರಾಟ ಮಾಡಿ ರೂ. 17,62,700/-ಗಳ ಆದಾಯ ಪಡೆಯಲಾಗಿದೆ. ಕೇಂದ್ರದಿಂದ 815 ಕೆ.ಜಿ ಗಳಷ್ಟು ಜೇನು ತುಪ್ಪವನ್ನು ಮಾರಾಟ ಮಾಡಲಾಗಿದೆ.
ಒಡಂಬಡಿಕೆಗಳು : ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಕೇಂದ್ರೀಯ ಲವಣ ಮಣ್ಣಿನ ಸಂಶೋಧನಾ ಸಂಸ್ಥೆ, ಕರ್ನಾಲ್ (ಸಿ.ಎಸ್.ಎಸ್.ಆರ್.ಐ), ಪಡೋವಾ ವಿಶ್ವವಿದ್ಯಾಲಯ (ಇಟಲಿ), ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ನವದೆಹಲಿ, ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಡಬ್ಯ್ಲೂಎಸ್.ಟಿ), ಬೆಂಗಳೂರು ಈ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ.
ವಿಸ್ತರಣೆ : ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ದಿವಸಗಳ ಕೃಷಿ ಮೇಳವನ್ನು “ಆದಾಯ ದ್ವಿಗುಣಕ್ಕೆ ಸಮಗ್ರ ಕೃಷಿ” ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ 13 ಶ್ರೇಷ್ಠ ಕೃಷಿಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುಮಾರು 4.5 ಲಕ್ಷ ರೈತ ಬಾಂಧವರು ಕೃಷಿ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿರುತ್ತಾರೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಭದ್ರಾವತಿ ಮತ್ತು ಚಿತ್ರದುರ್ಗ ಆಕಾಶವಾಣಿಯ “ನೇಗಿಲ ಮಿಡಿತ” ಹಾಗೂ “ಕೃಷಿ ಸಂಪದ” ಎಂಬ ವಿಶೇಷ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಪ್ರತಿನಿತ್ಯ ತಾಂತ್ರಿಕತೆಗಳನ್ನು ಜನಪ್ರಿಯ ಗೊಳಿಸಲಾಗುತ್ತಿದೆ. ಅಡಿಕೆ ಬೆಳೆಗಾರರಲ್ಲಿ ಅಡಿಕೆ ಕೊಯ್ಲು ಮತ್ತು ಅಡಿಕೆ ಔಷಧಿ ಸಿಂಪಡಣೆಯನ್ನು ಸರಳಗೊಳಿಸಲು ಕೊನೆಗಾರರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ತೀರ್ಥಹಳ್ಳಿಯಲ್ಲಿ ಒಂದು ಮತ್ತು ವಿಟ್ಲದಲ್ಲಿ ಎರಡು ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಕರಿಗಾಗಿ ಮ್ಯಾನೇಜ್ ಸಮೇತಿ, ಹೈದರಾಬಾದ್ ಇವರ ಪ್ರಾಯೋಜಕತ್ವದಲ್ಲಿ ನರ್ಸರಿ ನಿರ್ವಹಣೆ, ಕೃಷಿಯಲ್ಲಿ ಯಾಂತ್ರೀಕೃತ ಬೇಸಾಯ ಪದ್ಧತಿ, ಎರೆಹುಳು ಗೊಬ್ಬರ ತಯಾರಿಕೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವವಿದ್ಯಾಲಯದ ವಿಸ್ತರಣಾ ಘಟಕವು 08 ಕಾರ್ಯಾಗಾರ, 05 ವೃತ್ತಿ ತರಬೇತಿ ಮತ್ತು 212 ಒಳ ಹಾಗೂ ಹೊರ ಆವರಣ ತರಬೇತಿಗಳೊಂದಿಗೆ 17 ಮುಂಚೂಣಿ ಪ್ರಾತ್ಯಕ್ಷಿಕೆಗಳು, 15 ಕ್ಷೇತ್ರ ಪ್ರಯೋಗಗಳನ್ನು
ರೈತರುಗಳನ್ನು ಒಳಗೊಂಡು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಕಾರ್ಯಕ್ರಮದ ಮಣ್ಣು ಆರೋಗ್ಯ ನಿರ್ವಹಣೆ ಯೋಜನೆಯಡಿಯಲ್ಲಿ ರೂ.75 ಲಕ್ಷ ಅನುದಾನದಲ್ಲಿ ರೆಫರಲ್ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಿದ್ದು ಹಾಗೂ ರೂ.1.90 ಕೋಟಿ ಅನುದಾನದಲ್ಲಿ ವಿಶ್ವವಿದ್ಯಾಲಯದ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಬಲವರ್ಧನೆಗೊಳಿಸಲಾಗಿದೆ ಈ ಮೂಲಕ ರೈತರ ತಾಕುಗಳ ಮಣ್ಣಿನ ಪರೀಕ್ಷೆಯಿಂದ ರಸಗೊಬ್ಬರಗಳ ಸಧ್ಬಳಕೆಯಾಗುವುದು ಹಾಗೂ ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ನೆರವಾಗಲಿದೆ.
ನೂತನ ಆವರಣದ ಅಭಿವೃದ್ಧಿ : ವಿಶ್ವವಿದ್ಯಾಲಯದ ನೂತನ ಆವರಣವನ್ನು ಇರುವಕ್ಕಿಯಲ್ಲಿ ನಿರ್ಮಿಸಲು ರಾಜ್ಯ ಸರ್ಕಾರವು ರೂ.155.33 ಕೋಟಿಗಳ ಅನುದಾನ ನೀಡಿದ್ದು, ಈ ಅನುದಾನದಲ್ಲಿ ಇಲ್ಲಿಯವರೆಗೂ ರೂ. 117.67 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿರುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.37.66 ಕೋಟಿಗಳ ಬಿಡುಗಡೆಗೆ ಆರ್ಥಿಕ ಇಲಾಖೆ ಮತ್ತು ಕೃಷಿ ಇಲಾಖೆಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕಾಮಗಾರಿಗಳು ತೀವ್ರಗತಿಯಲ್ಲಿ ಪ್ರಗತಿಯಲ್ಲಿವೆ, ಹಾಗೂ ಪ್ರಸಕ್ತ ವರ್ಷದಿಂದ ನೂತನ ಆವರಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನೂತನ ತಾಂತ್ರಿಕ ಪರಿಣತಿಗಾಗಿ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತರಬೇತಿಗಾಗಿ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಸದರಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಐದು ಜನ ಶಿಕ್ಷಕ ಮತ್ತು ವಿಜ್ಞಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಪ್ರದೇಶದ ವಿಶೇಷವಾಗಿ ಮಲೆನಾಡು ಅರೆಮಲೆನಾಡು, ಕರಾವಳಿ ಹಾಗೂ ಒಣಪ್ರದೇಶದ ಕೃಷಿ ಬದುಕಿನ ಸಮಸ್ಯೆಗಳನ್ನು ಪರಿಹರಿಸುವತ್ತ ಅದಕ್ಕೆ ತಕ್ಕಂತೆ ಸಮರ್ಥ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಕೃಷಿಕರ ಸರ್ವತೋಮುಖ ಅಭಿವೃದ್ಧಿಗಾಗಿ ನಿಜ ಅರ್ಥದಲ್ಲಿ ರೈತರ ವಿಶ್ವವಿದ್ಯಾಲಯವನ್ನಾಗಿ ಮುನ್ನಡೆಸಲು ಬದ್ಧವಾಗಿದೆ. ವಿವಿಯಲ್ಲಿ ಬಹುದಿನಗಳಿಂದ ಖಾಲಿ ಇರುವ 109 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ|| ಪಿ.ನಾರಾಯಣಸ್ವಾಮಿ, ಎಂ.ಎಸ್.ನರಸರಾಜು, ಡಾ|| ಮಂಜುನಾಥ್, ಗುರುಮೂರ್ತಿ ಹಾಗೂ ಗಣೇಶಪ್ಪ ಮುಂತಾದವರು ಉಪಸ್ಥಿತರಿದ್ದರು.