ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಕಾಗೆಕೊಡಮಗ್ಗಿ ಗ್ರಾಮ ಪಂಚಾಯತಿಯ ಜಯನಗರ ಹಾಗೂ ಲಕ್ಷ್ಮೀಪುರ ಗ್ರಾಮದಲ್ಲಿ #ಮಹಾತ್ಮ_ಗಾಂಧಿ_ರಾಷ್ಟ್ರೀಯ_ಗ್ರಾಮೀಣ_ಉದ್ಯೋಗ_ಖಾತ್ರಿ ಯೋಜನೆಯಡಿ 7 ಮತ್ತು 8ನೇ ಝೋನ್ ನಾಲೆಗಳಲ್ಲಿ ತುಂಬಿದ್ದ ಹೂಳು ಎತ್ತುವ ಕಾಮಗಾರಿಯನ್ನು ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ -19 ಕಾರಣದಿಂದ ರಾಜ್ಯವು ಲಾಕ್ ಡೌನ್ ಮಾಡಿದ ಪರಿಣಾಮ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿ ರಾಜ್ಯ ಸರ್ಕಾರದಿಂದ ಪ್ರಾಧಿಕಾರಕ್ಕೆ ಅನುದಾನ ಬರುವಲ್ಲಿ ಹಿನ್ನಡೆಯಾಗಿತ್ತು.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಅಚ್ಚುಕಟ್ಟು ಭಾಗದಲ್ಲಿ ಪ್ರವಾಸ ಕೈಗೊಂಡ ಸಮಯದಲ್ಲಿ ಸಾಕಷ್ಟು ಪ್ರದೇಶದಲ್ಲಿ ನಾಲೆಗಳನ್ನು ವೀಕ್ಷಿಸಿದಾಗ ಬಹಳಷ್ಟು ಹೂಳು ಹಾಗೂ ಜಂಗಲ್ ನಿಂದ ನಾಲೆ ಮುಚ್ಚಿಹೋಗಿದ್ದನ್ನು ನೋಡಿದಾಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಲೋಚಿಸಿದಾಗ ಹೊಳೆದಿದ್ದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ #ನರೇಗಾ.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ನರೇಗಾ ಯೋಜನೆಯಡಿ ಮುಖ್ಯ ಕಾಲುವೆಗಳು ಹಾಗೂ ಉಪ ಕಾಲುವೆಗಳನ್ನು ಸುಮಾರು 120 ರಿಂದ 150ಕಿ.ಮೀಗೂ ಅಧಿಕ ವಿಸ್ತೀರ್ಣದಷ್ಟು ಹೂಳು ತಗೆಸಿದ್ದು, ಸುಮಾರು 6.50 ಕೋಟಿಗೂ ಅಧಿಕ ಅನುದಾನ ಉಪಯೋಗಿಸಿಕೊಂಡು, ಸುಮಾರು 1,60,000ಕ್ಕೂ ಅಧಿಕ ಮಾನವ ದಿನಗಳನ್ನು ಬಳಸಿಕೊಂಡು ನಾಲೆಗಳನ್ನು ಸ್ವಚ್ಛಗೊಳಿಸಿದ್ದೇವೆ ಇದು ಭದ್ರಾ ಕಾಡಾ ಇತಿಹಾಸದಲ್ಲಿ ಒಂದು ದಾಖಲೆ ಎಂದು ಹೆಮ್ಮೆ ಪಟ್ಟರು.
ರಾಜ್ಯದಲ್ಲಿ ಒಟ್ಟಾರೆ ಭದ್ರಾ ಸೇರಿದಂತೆ 6 ಕಾಡಾ ಪ್ರಾಧಿಕಾರವಿದ್ದು, ಇಲ್ಲಿಯವರೆಗೂ ಯಾವ ಕಾಡಾ ಪ್ರಾಧಿಕಾರವು ನರೇಗಾ ಬಳಸಿಕೊಂಡು ಕಾಲುವೆ ಸ್ವಚ್ಛಗೊಳಿಸಿರುವ ಉದಾಹರಣೆ ಇಲ್ಲ, ಈ ಮಟ್ಟದಲ್ಲಿ ಯೋಜನೆಯನ್ನು ಜಾರಿಗೆ ತಂದು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರಿಗೆ ಪ್ರಪ್ರಥಮ ಬಾರಿಗೆ ಗದ್ದಲ ಇಲ್ಲದೆ ನೀರು ತಲುಪಿಸಿರುವುದು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ಈ ಸಮಯದಲ್ಲಿ ತಿಳಿಸಿದರು.
ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಕೇಂದ್ರದ ಹಾಗೂ ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಈ ಮಹತ್ವಪೂರ್ಣ ಯೋಜನೆ ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಹಾಗೂ ಗ್ರಾಮೀಣ ಭಾಗದ ಜನ ಸಾಮಾನ್ಯನ ಆರ್ಥಿಕ ಪರಿಸ್ಥಿತ ಉತ್ತಮ ಪಡಿಸಲು ಅವಕಾಶ ಕಲ್ಪಿಸಿದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಸಮಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ರವಿ ಹಾಗೂ ಗ್ರಾಮಸ್ಥರು ಜೊತೆಗಿದ್ದರು.