ಶಿವಮೊಗ್ಗ, ಜನವರಿ 21 : ಬೆಳೆಯುತ್ತಿರುವ ನಗರಗಳ ಪ್ರಮಾಣಕ್ಕನುಗುಣವಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ನಗರದ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಪೌರಸೇವೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ವಿಸ್ತರಿಸುವ ಕುರಿತು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 125ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ತಯಾರಿಸಲಾಗಿದ್ದ ಕ್ರಿಯಾಯೋಜನೆಯ ಅನುಮೋದನೆಗಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಯೋಜನೆಗೆ ರಾಜ್ಯದ 10ಜಿಲ್ಲೆಗಳಲ್ಲಿ ಆಯ್ಕೆಯಾಗಿದ್ದು, ಮೈಸೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಗೆ ತಲಾ 150ಕೋಟಿ ಹಾಗೂ ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ತಲಾ 125ಕೋಟಿ ಅನುದಾನ ಮಂಜೂರಾಗಿದೆ ಎಂದವರು ನುಡಿದರು.
ಈಗಾಗಲೇ ಮಂಜೂರಾಗಿರುವ ಅನುದಾನದ ಸದ್ಬಳಕೆಗಾಗಿ ಮಾರ್ಗಸೂಚಿಯನ್ವಯ ಕ್ರಿಯಾಯೋಜನೆಯನ್ನು ತಯಾರಿಸಿದ್ದು, ಶೀಘ್ರವಾಗಿ ಸರ್ಕಾರದಿಂದ ಅನುಮೋದನೆ ಪಡೆದು ಕಾಮಗಾರಿಗಳನ್ನು ಆರಂಭಿಸುವಂತೆ ಸೂಚಿಸಿದ ಅವರು, ಸ್ಮಾರ್ಟ್ಸಿಟಿ ಯೋಜನೆ ವ್ಯಾಪ್ತಿಗೊಳಪಡುವ 6ವಾರ್ಡುಗಳನ್ನು ಹೊರತುಪಡಿಸಿ, ಉಳಿದ ವಾರ್ಡುಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತಲಾ 1ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಸೂಚಿಸಿದ ಅವರು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಾರ್ಡುಗಳಿಗೂ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಲು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಎಲ್ಲಾ ಸದಸ್ಯರುಗಳು, ಶಾಸಕರಿಗೆ ಮಾರ್ಗಸೂಚಿಯೊಂದಿಗೆ ಮಾಹಿತಿ ನೀಡಿ, ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದ ಸಚಿವರು, ಕೈಗೊಳ್ಳುವ ಕಾಮಗಾರಿ ಒಂದೇ ಆಗಿದ್ದು, ಒಟ್ಟು ಒಂದು ಕೋಟಿ ರೂ.ಗಳ ಮಿತಿಯೊಳಗಿರುವಂತೆ ನೋಡಿಕೊಳ್ಳಬೇಕು. ಈ ಅನುದಾನದಲ್ಲಿ ಅಮೃತ ಯೋಜನೆಯ ಅನುಷ್ಠಾನಕ್ಕೆ 13.00ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಅಲ್ಲದೇ ನಗರದ ಉದ್ಯಾನವನಗಳ ಅಭಿವೃದ್ಧಿಗೂ 2.75ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಹಾನಗರಪಾಲಿಕೆ ಉಪಮಹಾಪೌರ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಯೋಜನಾ ನಿರ್ದೇಶಕ ನಾಗೇಂದ್ರ ಎಫ್ ಹೊನ್ನಳ್ಳಿ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.