ಶಿವಮೊಗ್ಗ : ಅಕ್ಟೋಬರ್ 22 : ಕಳೆದ ನಾಲ್ಕಾರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಕೆಲವು ವಾರ್ಡ್ಗಳ ಜನವಸತಿಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನೀರು ನುಗ್ಗಿ ಹಾನಿಗೊಳಗಾದ ಪ್ರದೇಶಗಳಿಗೆ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಪಾಲಿಕೆ ಉಪಮೇಯರ್ ಸೇರಿದಂತೆ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂಧಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ರಸ್ತೆಗೆ ಹೊಂದಿಕೊಂಡಂರಿರುವ ಹಳೆ ಮಂಡ್ಲಿ ಒಂದು ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದೇ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಾನಿಯುಂಟಾಗಿರುವುದನ್ನು ಖುದ್ದಾಗಿ ಗಮನಿಸಿದರು. ಈ ಪ್ರದೇಶದಲ್ಲಿ ಚರಂಡಿ ನಿರ್ಮಿಸಲು ಪಾಲಿಕೆ ವ್ಯಾಪ್ತಿಗೊಳಪಡುವ ಜಾಗವಿಲ್ಲದಿರುವುದರಿಂದ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ವಟಾರೆ ಅವರು ಅಲ್ಲಿನ ನಿವಾಸಿಗಳಿಗೆ ಮನವರಿಕೆ ಮಾಡಿಕೊಟ್ಟು, ಅವರ ಮನವೊಲಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ತಾತ್ಕಾಲಿಕವಾಗಿ ಚರಂಡಿ ನಿರ್ಮಿಸಲು ಪಾಲಿಕೆಯ ಸಿಬ್ಬಂಧಿಗಳಿಗೆ ಸೂಚಿಸಿದರು. ಅಂತೆಯೇ ಚರಂಡಿ ನಿರ್ಮಾಣಕಾರ್ಯವೂ ಮುಕ್ತಾಯವಾಗಿ ಸರಾಗವಾಗಿ ನೀರು ಹರಿದು ಹೋಗಲು ಅನುಕೂಲ ಕಲ್ಪಿಸಲಾಯಿತು.
ನಗರದ ಬಾಪೂಜಿ ನಗರದಲ್ಲಿ ಈ ಹಿಂದೆ ಬಿದ್ದ ಭಾರೀ ಮಳೆಯಿಂದಾಗಿ ಹಾನಿಯಾಗಿದ್ದ ರಾಜಾಕಾಲುವೆ ಪುನರ್ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಅಮೃತ ಯೋಜನೆಯಡಿಯಲ್ಲಿ ಅಗತ್ಯ ಅನುದಾನ ಬಿಡುಗಡೆಯಾಗಿದೆ. ಪ್ರಸ್ತುತ ಮಳೆ ನಿರಂತರವಾಗಿರುವುದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಲ್ಲಿನ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಸಂಪರ್ಕ ರಸ್ತೆ ನಿರ್ಮಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಅಲ್ಲದೇ ನಗರದ ಹಲವೆಡೆ ಮಳೆಯಿಂದ ಹಾನಿಗೊಳಗಾದ ಗೋಪಾಳ, ಇಮಾಮ್ಬಾಡ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಆಯುಕ್ತರು ಸಂಬಂಧಿಸಿದ ಅಧಿಕಾರಿ, ಸಿಬ್ಬಂಧಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪಮಹಾಪೌರ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ||ಶಿವಯೋಗಿ ಯಲಿ ಸೇರಿದಂತೆ ಪಾಲಿಕೆ ಸದಸ್ಯರಾದ ಶ್ರೀಮತಿ ಸುರೇಖಾ ಮುರಳೀಧರ್, ರಮೇಶ್ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.