ಈ ಸಲದ ಮಳೆಗಾಲ ನಿರೀಕ್ಷಿತ ಮಟ್ಟದಲ್ಲಿ ಮಳೆ ತರದಿದ್ದರೂ ಬೇಸಿಗೆಯ ಪ್ರಖರತೆಗೆ ನಲುಗಿದ್ದ ಭೂತಾಯಿ ಒಡಲಿಗೆ ತಂಪೆರಚಿ ಜನ-ಜಾನುವಾರುಗಳಿಗೆ ಜೀವಜಲ ಧಾರೆಯೆರೆದಿದ್ದಂತೂ ಸತ್ಯ. ಬರಗಾಲದಲ್ಲಿ ಮೇವಿಗಾಗಿ ಹಾತೊರೆದು ಬಳಲಿ ಬೆಂಡಾಗಿದ್ದ ಜಾನುವಾರುಗಳು ಎಲ್ಲೆಲ್ಲೂ ಹಸಿರು ಹೊದ್ದು ಭೂತಾಯಿಯ ಒಡಲಲ್ಲಿ ಬೆಳೆದ ಹಸಿರು ಮೇವನ್ನು ಮೆಲ್ಲುವುದನ್ನು ನೋಡುವುದೇ ಒಂದು ಸೊಬಗು.
ಮಳೆಗಾಲ ಜಾನುವಾರುಗಳಿಗೆ ಸಮೃದ್ಧ ಮೇವಿನ ಜೊತೆಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡುವ ಸಂಭವವಿರುತ್ತದೆ. ಆದ ಕಾರಣ ಜಾನುವಾರುಗಳ ಮಾಲೀಕರು ಕೆಲವಾರು ಮುಂಜಾಗ್ರತ ಕ್ರಮಗಳ ಜೊತೆಗೆ ತಮ್ಮ ಪಾಲನಾ ಪದ್ಧತಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕ.
ಲಸಿಕೆ: ಹೆಚ್ಚು ಮಳೆ ಬಿದ್ದಾಗ ವಾತವರಣದಲ್ಲಿನ ಉಷ್ಣತೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತದೆ. ಜೊತೆಗೆ ವಾತಾವರಣದಲ್ಲಿನ ಆದ್ರ್ರತೆಯಲ್ಲಿ (ನೀರಿನಾಂಶ) ಏರು ಪೇರಾಗುತ್ತದೆ. ಈ ರೀತಿಯ ವಾತಾವರಣವು ರೋಗ ತರುವ ಸೂಕ್ಷ್ಮಾಣು ಜೀವಿಗಳು ಮತ್ತು ಪರಾವಲಂಬಿ ಜೀವಿಗಳ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾದುದು. ಇದರಿಂದ ಜಾನುವಾರುಗಳು ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು. ಆದ ಕಾರಣ ಮುಂಗಾರು ಆರಂಭದ ಪೂರ್ವದಲ್ಲೇ ಹಸು, ಎಮ್ಮೆಗಳಿಗೆ ಕಾಲು-ಬಾಯಿ ಜ್ವರ, ಗಂಟಲು ಬೇನೆ, ಚಪ್ಪೆ ರೋಗ ಹಾಗೂ ಕುರಿ ಮೇಕೆಗಳಿಗೆ ಪಿ.ಪಿ.ಆರ್. ಮತ್ತು ಕರುಳು ಬೇನೆ ವಿರುದ್ಧ ಲಸಿಕೆಗಳನ್ನು ಹಾಕಿಸುವುದು ಬಹಳ ಮುಖ್ಯ. ಇವುಗಳ ಜೊತೆಗೆ ಉಸಿರಾಟ ಸಂಬಂಧಿಸಿದ ರೋಗಗಳು, ಕೆಚ್ಚಲು ಬಾವು ಇನ್ನಿತರ ರೋಗ ಬರುವ ಸಂಭವವಿದ್ದು ಇವುಗಳು ಬಾರದಂತೆ ಸೂಕ್ತ ಮುನ್ನೆಚ್ಚೆರಿಕೆ ವಹಿಸುವುದು ಬಹು ಮುಖ್ಯ. ಮಳೆಗಾಲದಲ್ಲಿ ಒಳಪರಾವಲಂಬಿ ಜೀವಿಗಳ ಸಮಸ್ಯೆ ಹೆಚ್ಚು ಕಂಡುಬರುವುದರಿಂದ ಸೂಕ್ತ ಜಂತು ನಾಶಕ ನೀಡಬೇಕಾಗುತ್ತದೆ.
ಕೊಟ್ಟಿಗೆ ನಿರ್ವಹಣೆ: ಮಳೆಗಾಲದಲ್ಲಿ ಜಾನುವಾರುಗಳ ಕೊಟ್ಟಿಗೆಯ ನಿರ್ವಹಣೆಯು ಇನ್ನೊಂದು ಬಹಳ ಮುಖ್ಯ ಅಂಶ. ಎಲ್ಲಿಯೂ ಮಳೆಯ ನೀರು ಸೋರದಂತೆ, ಕೊಟ್ಟಿಗೆಯಲ್ಲಿ ಎಲ್ಲೂ ನೀರು ನಿಲ್ಲದಂತೆ ಸೂಕ್ತ ಛಾವಣಿಯ ವ್ಯವಸ್ಥೆಯ ಜೊತೆಗೆ ಕೊಟ್ಟಿಗೆಯ ಶುಚಿತ್ವ ಕುರಿತು ಮುಂಜಾಗ್ರತೆ ವಹಿಸಬೇಕು. ಬಿದ್ದ ಸಗಣಿಯನ್ನು ಆಗ್ಗಾಗ್ಗೆ ಸೂಕ್ತ ವಿಲೇವಾರಿ ಮಾಡಿ ದೇಹಕ್ಕೆ ಮೆತ್ತಿದ್ದ ಮಣ್ಣು ಮತ್ತು ಸಗಣಿಯನ್ನು ಆಗ್ಗಾಗ್ಗೆ ಶುಚಿಗೊಳಿಸಬೇಕು. ಇಲ್ಲದಿದ್ದರೆ ಅವು ಸೂಕ್ಷ್ಮಾಣು ಜೀವಿಗಳ ತಾಣವಾಗಿ ಜಾನುವಾರುಗಳು ರೋಗಗಳಿಗೆ ಬಲಿಯಾಗುವ ಸಂಭವ ಹೆಚ್ಚು. ಜೊತೆಗೆ ಜಾನುವಾರುಗಳಿಗೆ ದಿನಕ್ಕೆ 10 ರಿಂದ 12 ಗಂಟೆಗಳ ವಿಶ್ರಾಂತಿ ಆವಶ್ಯಕತೆಯಿರುತ್ತದೆ. ಆದ ಕಾರಣ ಅವುಗಳು ವಿಶ್ರಮಿಸುವ ಸ್ಥಳದಲ್ಲಿ ಒಣಮೇವಿನ ಹಾಸಿಗೆ ನಿರ್ಮಿಸುವುದು ಒಳ್ಳೆಯದು.
ಆಹಾರ ಕ್ರಮ: ಮಳೆಗಾಲದಲ್ಲಿ ವಾತಾವರಣದ ಉಷ್ಣತೆ ಮತ್ತು ಜಾನುವಾರುಗಳ ದೇಹದ ಉಷ್ಣತೆಯಲ್ಲಿ ಸಾಕಷ್ಟು ಕಡಿಮೆಯಿರುವುದರಿಂದ ತನ್ನ ದೇಹದ ಶಾಖವನ್ನು ಕಾಯ್ದುಕೊಳ್ಳಲು ಹೆಚ್ಚೆಚ್ಚು ಆಹಾರದ ಅವಶ್ಯಕತೆ ಇರುತ್ತದೆ. ಆದ ಕಾರಣ ಹಸಿ ಮೇವಿನ ಜೊತೆಗೆ ಒಣ ಹುಲ್ಲು, ಹಿಂಡಿ, ದಾಣಿ ಮಿಶ್ರಣವನ್ನೊಳಗೊಂಡ ಸಮತೋಲನ ಆಹಾರ ನೀಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅವು ಒತ್ತಡಕ್ಕೆ ಒಳಗಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗ ರುಜಿನಗಳಿಂದ ಬಳಲಬಹುದು.

ಮಳೆಗಾಲದಲ್ಲಿ ಹಸುಗಳಿಗೆ ಹೆಚ್ಚಾಗಿ ಹಸಿರು ಮೇವನ್ನು ನೀಡವುದು ವಾಡಿಕೆ. ಆದರೆ ಮಳೆಗಾಲದಲ್ಲಿ ಸಿಗುವ ಹಸಿರು ಮೇವಿನಲ್ಲಿ ಹೆಚ್ಚಿನ ನೀರಿನಾಂಶವಿದ್ದು, ನಾರಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಇದರಿಂದ ಹಸು ನೀಡುವ ಹಾಲಿನ ಗುಣಮಟ್ಟದಲ್ಲಿ ಮುಖ್ಯವಾಗಿ ಹಾಲಿನ ದರವನ್ನು ನಿರ್ಧರಿಸುವ ಡಿಗ್ರಿಯಲ್ಲಿ ಇಳಿಕೆ ಉಂಟಾಗುತ್ತದೆ. ಆದ ಕಾರಣ ಹಸಿ ಮೇವಿನ ಜೊತೆಗೆ ಒಣಮೇವು ನೀಡುವುದು ಸೂಕ್ತ. ಒಟ್ಟು ಮೇವಿನ ಅವಶ್ಯಕತೆಯಲ್ಲಿ ಮೂರನೇ ಒಂದು ಭಾಗದಷ್ಟು ಒಣ ಮೇವನ್ನು ನೀಡಬೇಕು.
ಮಳೆಗಾಲದಲ್ಲಿ ಜಾನುವಾರುಗಳಿಗೆ ನೀಡುವ ದಾಣಿ ಮಿಶ್ರಣದ ಸೂಕ್ತ ಸಂಗ್ರಹಣೆ ಮತ್ತ್ನೊಂದು ಮುಖ್ಯ ಅಂಶ. ಏಕೆಂದರೆ, ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ದಾಣಿ ಮಿಶ್ರಣದಲ್ಲಿ ಶಿಲ್ರೀಂಧ್ರಗಳ ಬೆಳವಣಿಗೆಯ ಸಂಭವ ಹೆಚು,್ಚ. ಇದರಿಂದ ದಾಣಿ ಮಿಶ್ರಣ ಕೆಟ್ಟು ಆರೋಗ್ಯಕ್ಕೆ ಹಾನಿಉಂಟುಮಾಡುತ್ತದೆ.
ಇದಲ್ಲದೇ, ಜಾನುವಾರುಗಳನ್ನು ಕನಿಷ್ಠ ಎರಡು ಗಂಟೆ ಮೇಯಲು ಬಿಡುವುದರಿಂದ ದೇಹಕ್ಕೆ ವ್ಯಾಯಾಮ ದೊರೆತು ಲವಲವಿಕೆಯಿಂದ ಇರಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹಾಗೆಯೇ, ಪಶು ವೈದ್ಯರ ಸಲಹೆ ಸೂಚನೆಯಂತೆ ಪಶುಪಾಲಕರು ವೈಜ್ಞಾನಿಕ ಪಾಲನಾ ಪದ್ಧತಿಗಳನ್ನು ಅನುಸರಿಸಿದರೆ ಜಾನುವಾರುಗಳಿಗೆ ಉಂಟಾಗುವ ಸಮಸ್ಯೆಗಳನ್ನು ತಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ

ಡಾ.ಭರತ್ ಭೂಷಣ್.ಎಮ್, 90366 96815, ಡಾ.ಸತೀಶ್.ಜಿ.ಎಮ್, 94482 24595 ಮತ್ತು ಡಾ.ಉಮೇಶ್.ಬಿ.ಯು. 9916208462
ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ,
ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

error: Content is protected !!