ಶಿವಮೊಗ್ಗ, ಸೆಪ್ಟಂಬರ್ 29 : ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರವರ್ಗ-3 ರಡಿ 2(ಎ) ಯಿಂದ (ಎಫ್) ವರೆಗೆ ಬರುವ ಸಮುದಾಯಗಳ ಜನರ ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ದಿಗಾಗಿ 2023-24 ನೇ ಸಾಲಿಗೆ ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ(ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ), ಜೀಜಾವು-ಜಲಭಾಗ್ಯ ಯೋಜನೆ (ಗಂಗಾಕಲ್ಯಾಣ ನೀರಾವರಿ ಯೋಜನೆ), ಶೈಕ್ಷಣಿಕ ಸಾಲ ಯೋಜನೆಗಳು, ಮರಾಠ ಮಿಲ್ಟ್ರಿ ಹೋಟೆಲ್ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್ಗಳ ಸಹಯೋಗದೊಂದಿಗೆ), ಸ್ವಾವಲಂಭಿ ಸಾರಥಿ ಯೋಜನೆ, ಸ್ವಾತಂತ್ರ್ಯ ಅಮೃತ್ ಮಹೋತ್ಸವ ಮುನ್ನಡೆ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು, ಅವರ ಖಾಯಂ ವಿಳಾಸ ಕರ್ನಾಟಕ ರಾಜ್ಯದಲ್ಲಿರಬೇಕು. ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ.
ಮೇಲ್ಕಂಡ ಯೋಜನೆಗಳಿಗೆ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್ಲೈ ಮೂಲಕ ಅಕ್ಟೋಬರ್ 30 ರೊಳಗೆ ಸಲ್ಲಿಸುವುದು. ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್ಲೈನ್ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.