ಶಿವಮೊಗ್ಗ, ಎ.09 :ಈ ಬಾರಿ ಶಿವಮೊಗ್ಗ ಜಿಲ್ಲೆಯನ್ನು ಮತದಾನ ಪ್ರಮಾಣದಲ್ಲಿ ರಾಜ್ಯಕ್ಕೆ ನಂಬರ್ ಒನ್ ಮಾಡಬೇಕು ಎಂದು ಪಣತೊಟ್ಟಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ನಗರ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ತಪ್ಪದೇ ಮತ ಚಲಾಯಿಸುವಂತೆ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಅವರು ಮಂಗಳವಾರ ಭದ್ರಾವತಿ ನಗರದಲ್ಲಿ ಮನೆಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪ್ರತಿಯೊಬ್ಬರೂ ಎಪ್ರಿಲ್ 23ರಂದು ತಪ್ಪದೇ ಮತದಾನ ಮಾಡುವುದು ಮಾತ್ರವಲ್ಲದೆ ಬೇರೆಯವರನ್ನೂ ಮತದಾನ ಮಾಡುವಂತೆ ಪ್ರೇರೇಪಿಸುವಂತೆ ಮನವಿ ಮಾಡಿದರು.
ಈ ಹಿಂದಿನ ಚುನಾವಣೆಗಳ ಅಂಕಿಅಂಶಗಳನ್ನು ಪರಿಶೀಲಿಸಿದರೆ ಶಿವಮೊಗ್ಗ ನಗರ, ಭದ್ರಾವತಿ ಸೇರಿದಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಗ್ರಾಮೀಣ ಭಾಗಕ್ಕಿಂತ ಕಡಿಮೆಯಾಗಿರುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಮಾತ್ರವಲ್ಲದೆ ನಗರ ಪ್ರದೇಶದ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ವೈಯಕ್ತಿಕವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ.’
ಜಿಲ್ಲೆಯಲ್ಲಿ ಒಟ್ಟು 75ಸಾವಿರ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ತೀರ್ಥಹಳ್ಳಿ, ಸಾಗರ ಪಟ್ಟಣಗಳಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಲಾಗಿದೆ. ಶಿವಮೊಗ್ಗ ನಗರದಲ್ಲಿ 5ಹಂತಗಳಲ್ಲಿ ಮನೆಮನೆ ಭೇಟಿ ಕಾರ್ಯವನ್ನು ಈಗಾಗಲೇ ನಡೆಸಲಾಗಿದೆ. ಎಲ್ಲಾ ಮನೆಗಳಿಗೂ ಹಂತಹಂತವಾಗಿ ಭೇಟಿ ನೀಡಲಾಗುವುದು. ಮನೆಮನೆ ಭೇಟಿ ಕಾರ್ಯದಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದು, ಇವರ ತಂಡಗಳನ್ನಾಗಿ ವಿಂಗಡಿಸಿ ಜಾಗೃತಿ ಕಾರ್ಯವನ್ನು ಆಯಾ ಮತಗಟ್ಟೆ ಅಧಿಕಾರಿಗಳ ಸಹಕಾರದೊಂದಿಗೆ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಭೇಟಿ ನೀಡಿದ ಪ್ರತಿ ಮನೆಯಲ್ಲಿ ಗುರುತಿಗಾಗಿ ಮತದಾನ ಜಾಗೃತಿ ಸಂದೇಶವನ್ನು ಒಳಗೊಂಡ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಕೆಲವು ನಾಗರಿಕರು ಸ್ವಯಂ ಪ್ರೇರಿತರಾಗಿ ಜಾಗೃತಿ ಕಾರ್ಯದಲ್ಲಿ ಕೈಜೋಡಿಸಿರುವುದು ವಿಶೇಷ. ಪ್ರತಿಯೊಂದು ಕಡೆಗಳಲ್ಲಿಯೂ ಸಕರಾತ್ಮಕವಾದ ಪ್ರತಿಕ್ರಿಯೆಗಳು ದೊರೆಯುತ್ತಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
`ಯಾರಿಗಾದರೂ ಓಟ್ ಮಾಡಿ ಆದರೆ ಓಟ್ ಮಾಡಿ’ ಎಂಬ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.
ಜಿಲ್ಲೆಯ ಚುನಾವಣಾ ಐಕಾನ್ ಸ್ಟ್ಯಾನಿ ಜಾರ್ಜ್, ಉಪವಿಭಾಗಾಧಿಕಾರಿ ಪ್ರಕಾಶ್, ನಗರಸಭೆ ಅಧಿಕಾರಿಗಳು ಮತ್ತಿತರರು ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.