News Next

ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಮಗು ಜನಿಸುವುದು ಸಾಧ್ಯವಾಗಲಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ಹೇಳಿದರು.
ಅವರು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಅಪೌಷ್ಠಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಿಲ್ಲೆಯ 180ಮಕ್ಕಳು ಹಾಗೂ ಅಪೌಷ್ಟಿಕತೆಯ ಅಂಚಿನಲ್ಲಿರುವ 4620ಮಕ್ಕಳು ಸೇರಿದಂತೆ ಒಟ್ಟು4800ಮಕ್ಕಳಗೆ ಪೌಷ್ಟಿಕಾಂಶಯುಕ್ತ ಚಾಕೋಲೇಟ್‍ಗಳನ್ನು ಇಲಾಖೆಯಿಂದ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಚಾಕೋಲೇಟ್‍ಗಳನ್ನು ದಿನಕ್ಕೊಂದರಂತೆ ತಾಯಂದಿರು ಮಗುವಿಗೆ ನೀಡಬೇಕು. ಇದರಿಂದಾಗಿ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಅಪೌಷ್ಠಿಕ ಮಕ್ಕಳ ಸಂಖ್ಯೆ ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದರು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಬೆಳಗಾವಿ, ಶಿವಮೊಗ್ಗ, ಉತ್ತರಕನ್ನಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದ ಅವರು, ತಾಯಿ ಮತ್ತು ಮಗುವಿನ ಸಂಬಂಧ ಸದಾ ಸಂತಸದಾಯಕವೂ ಚಿರಸ್ಥಾಯಿಯಾಗಿರಲಿದೆ ಎಂದವರು ನುಡಿದರು.
ತಾಯಿ ಮತ್ತು ಮಕ್ಕಳ ಸಬಲೀಕರಣದಂತಹ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸರ್ಕಾರ ಹಿಂದೆಂದಿಗಿಂತ ಹೆಚ್ಚಿನ ಒತ್ತು ನೀಡಿದೆ. ಅವರ ಸುರಕ್ಷತೆ ಹಾಗೂ ರಕ್ಷಣೆಗೆ ಅಗತ್ಯ ಕ್ರಮ ವಹಿಸಿದೆ. ಅವರ ತಪಾಸಣೆ, ಔಷಧೋಪಚಾರ, ಪೌಷ್ಠಿಕ ಆಹಾರ ವಿತರಣೆಗೂ ಮುಂದಾಗಿದೆ ಎಂದವರು ನುಡಿದರು.
ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಸರ್ಕಾರದ ಮಾರ್ಗದರ್ಶನದಂತೆ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆಮನೆಗೆ ತಲುಪಿಸುತ್ತಿರುವ ಹಾಗೂ ಗರ್ಭದಿಂದ ಗೋರಿಯವರೆಗಿನ ಪ್ರತಿ ಹಂತದಲ್ಲೂ ಸಾರ್ವಜನಿಕ ಹಿತಕಾಯುವಲ್ಲಿ ಆಶಾ ಕಾರ್ಯಕರ್ತೆಯರೊಡಗೂಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಸ್ಮರಣೀಯವಾದುದು ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ, ಎದುರಿಸುತ್ತಿರುವ ಸವಾಲುಗಳನ್ನು ಅರಿತು ಅವರ ಸಂಕಷ್ಟಗಳಿಗೆ ಪೂರಕವಾಗಿ ಸರ್ಕಾರದ ಸ್ಪಂದಿಸಿದೆ. ಅವರ ವೇತನದಲ್ಲಿ ಹೆಚ್ಚಳ ಮಾಡಿದೆ ಅಲ್ಲದೆ ಬಹುದಿನಗಳಿಂದ ನೀಡಬೇಕಾಗಿದ್ದ ಬಾಕಿ ವೇತನವನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಕೊರೋನ ನಿಯಂತ್ರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಸ್ಮರಣೀಯವಾದುದು. ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸುವುದು ಶ್ರೀಮಂತ ಭಾರತೀಯ ಸಂಸ್ಕøತಿಯ ಪ್ರತೀಕವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ನೆರವಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ. ಯಾವುದೇ ಧರಣಿಯ ಮೂಲಕ ಸರ್ಕಾರದ ಗಮನಸೆಳೆಯುವ ಅಗತ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮೇಯರ್ ಶ್ರೀಮತಿ ಸುವರ್ಣ ಶಂಕರ್, ಉಪಮೇಯರ್ ಶ್ರೀಮತಿ ಸುರೇಖಾ ಮುರಳೀಧರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಹರಿಹರದ ಅಗ್ರಿಟೆಕ್ ಸಂಸ್ಥೆಯ ವ್ಯವಸ್ಥಾಪಕ ಸಿದ್ಧಾರ್ಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಎಸ್.ಪಾಂಚಾಳ ಮತ್ತಿತರರು ಉಪಸ್ಥಿತರಿದ್ದರು.

error: Content is protected !!