ಮೇ. 27 ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಎ.ಅಣ್ಣಾಪುರ ಗ್ರಾಮದಲ್ಲಿ ಪೂಜೆ ಸಂದರ್ಭದಲ್ಲಿ ಭೋಜನ ಸೇವಿಸಿ ಅಸ್ವಸ್ಥಗೊಂಡಿರುವವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ಅವರು ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಶಿಕಾರಿಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸಾಮೂಹಿಕ ಭೋಜನ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದನ್ನು ಖಾತ್ರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎ.ಅಣ್ಣಾಪುರ ಗ್ರಾಮದ ಗಣೇಶ ಶೆಟ್ಟಿ ಎಂಬವರ ಮನೆಯಲ್ಲಿ ಮೇ 24ರಂದು ಆಯೋಜಿಸಲಾಗಿದ್ದ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಭೋಜನ ಸೇವಿಸಿ ಸುಮಾರು 40 ಮಂದಿ ಅಸ್ವಸ್ಥರಾಗಿದ್ದು, ಶಿಕಾರಿಪುರ ಆಸ್ಪತ್ರೆಯಲ್ಲಿ 35ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಕೆಲವು ಸಣ್ಣ ಪ್ರಮಾಣದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲರೂ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮುಡುಬಸಿದ್ದಾಪುರ ಗ್ರಾಮ ಪಂಚಾಯತಿಗೆ ಸೇರಿದ ಎ.ಅಣ್ಣಾಪುರ ಗ್ರಾಮದ ಪ್ರತಿ ಮನೆಗೆ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಜನರ ಆರೋಗ್ಯ ಪರಿಸ್ಥಿತಿ ವಿಚಾರಿಸಿದ್ದಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಬಳಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಮನೆಗೆ ಆಲೋಜಿನ್ ಮಾತ್ರೆಯನ್ನು ವಿತರಿಸಲಾಗಿದ್ದು, ಕುಡಿಯುವ ನೀರಿಗೆ ಈ ಮಾತ್ರೆಯನ್ನು ಹಾಕಿ ಕುಡಿಯುವಂತೆ ತಿಳಿಸಲಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಗ್ರಾಮದಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯತಿಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಉಸ್ತುವಾರಿ ಸಚಿವರ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಘಟನೆಯ ವಿವರಗಳನ್ನು ಪಡೆದು, ತಕ್ಷಣ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ವೈದ್ಯಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.


error: Content is protected !!