ಶಿವಮೊಗ್ಗ: ಶಿವ ಸಾಮಾನ್ಯರ ದೇವರು, ಪ್ರಕೃತಿಯ ಪ್ರತೀಕ, ಭಕ್ತಿಗೆ ಒಲಿಯುವನು ಶಿವ. ಧ್ಯಾನದ ಮೂಲಪುರುಷ. ಧ್ಯಾನ ಯೋಗಿ ಶಿವ ಅರ್ಧ ಕಣ್ಣು ತೆರೆದಿದ್ದು, ಅದರಿಂದ ಭಕ್ತನಿಗೆ ಶಕ್ತಿ ಚೈತನ್ಯ ದೊರೆಯುತ್ತದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ವಿನೋಬನಗರ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಸ್ಥಾಪಿತವಾಗಿರುವ ಶ್ರೀ ಧ್ಯಾನಯೋಗಿ ಶಿವನ ಮೂರ್ತಿ ಅನಾವರಣ ಹಾಗೂ ಮಾನಸ ಮೌನ ಪಿರಮಿಡ್ ಧ್ಯಾನಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗ, ಧ್ಯಾನಕ್ಕೆ ಶಿವಗಂಗಾ ಯೋಗ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದೆ. ಮನುಷ್ಯನ ಮನಸ್ಸು ಬುದ್ಧಿಯು ಸಮಸ್ಯೆಗಳ ಸಂತೆ. ಆಸಕ್ತರು ಯೋಗ ಮತ್ತು ಧ್ಯಾನದಿಂದ ನೆಮ್ಮದಿಯನ್ನು ಪಡೆದುಕೊಳ್ಳಬೇಕು. ಯೋಗ ಕೇಂದ್ರ ಕಟ್ಟುವ ಮಹಾಕಾರ್ಯ ಮಾಡಿರುವ ಯಶಸ್ಸು ಸರ್ವರಿಗೂ ಸಿಗಲಿ ಎಂದು ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಮಹಾಪೋಷಕ ಗೋಣೀಬೀಡಿನ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಯೋಗಾಚಾರ್ಯ ರುದ್ರಾರಾಧ್ಯರು ನಿಜವಾದ ಯೋಗಿ, ನಿಸ್ವಾರ್ಥಿಯಾದ ಅವರು ತಾವು ಪಡೆದ ಯೋಗ ಶಕ್ತಿಯನ್ನು ಇತರಿಗೆ ಹಂಚಿದ ವ್ಯಕ್ತಿ. ಯೋಗ ಬರಬೇಕು ಎಂದರೆ ಯೋಗಿ ಆಗಿರಬೇಕು ಎಂದರು.
ಶಿವಗಂಗೆಯ ಡಾ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವನನ್ನು ನೋಡಲಿಕ್ಕಾಗದು, ಅನು ಕ್ಷಣವು ಶಿವನನ್ನು ನೆನೆಯಬೇಕೆಂದು ಹಿರಿಯರು ಮನೆಯಲ್ಲಿರುವ ಸದಸ್ಯರಿಗೆ ಶಿವನ ಹೆಸರು ಇಡುತ್ತಿದ್ದರು. ಮೋಕ್ಷಕ್ಕೆ ಶಿವನೆಂಬ ಎರಡು ಅಕ್ಷರ ಸಾಕು. ಧ್ಯಾನ ಯೋಗಿ ಶಿವ ತಪಸ್ಸು ಮಾಡುತ್ತಿರುತ್ತಾನೆ. ನಮ್ಮನ್ನು ನಾವು ಅರ್ಥೈಸಿಕೊಳ್ಳಲು ತಪಸ್ಸು ಧ್ಯಾನ ಅವಶ್ಯಕ ಎಂದು ಹೇಳಿದರು.
ನಾವು ಶಾಂತವಾಗಿ ಆರೋಗ್ಯವಾಗಿರಬೇಕು, ಮುಖದಲ್ಲಿ ತೇಜಸ್ಸಿದೆ ಎಂದರೆ ಅವನು ಯೋಗಿ ಎಂದು ತಿಳಿಯಬಹುದು. ಮನುಷ್ಯ ಕೊಟ್ಟದ್ದು ಮನೆಯ ತನಕ ದೇವರು ಕೊಟ್ಟದ್ದು ಕೊನೆಯ ತನಕ. ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿ ನಮ್ಮ ಮನವ ಸಂತೈಸಿಕೊಂಡು ಶಿವನನ್ನು ಭಕ್ತಿಯಿಂದ ಸ್ಮರಿಸಿದರೆ ಅವನಿಗೆ ನಮ್ಮನ್ನು ನಾವು ಅರ್ಪಣೆ ಮಾಡಿ ಕೊಂಡಂತೆ. ಸರ್ವ ವ್ಯಾಪಿಯಾಗಿರುವ ಭಗವಂತನಲ್ಲಿ ಭಕ್ತಿಯನ್ನು ಸಮರ್ಪಿಸಿ ಅವನ ಕೃಪೆಯನ್ನು ಪಡೆಯಬಹುದು ಎಂದು ಆಶೀರ್ವದಿಸಿದರು.
ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಎಸ್.ಲಿಂಗಮೂರ್ತಿ, ಯೋಗ ಕೇಂದ್ರದ ವಿಶ್ವಸ್ಥ ಸಮಿತಿಯ ಬಿ.ಸಿ.ನಂಜುಂಡ ಶೆಟ್ಟಿ, ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಕಲಗೋಡು ರತ್ನಾಕರ್, ಹೊಸತೋಟ ಸೂರ್ಯ ನಾರಾಯಣ್, ಬಿ.ವೈ.ಅರುಣಾದೇವಿ, ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ, ಡಾ. ವಿಮಲಾ, ಡಾ. ಎನ್.ಎಲ್.ನಾಯಕ್, ಪುಷ್ಪ ಶೆಟ್ಟಿ, ಜಿ.ವಿಜಯಕುಮಾರ್, ವಿಜಯ ಬಾಯರ್, ಡಾ. ಗಾಯತ್ರಿ ದೇವಿ ಸಜ್ಜನ್, ಡಾ. ಪದ್ಮನಾಭ ಅಡಿಗ, ಡಾ. ನಾಗರಾಜ್ ಪರಿಸರ, ಜಿ.ಎಸ್.ಓಂಕಾರ್, ಲವ ಕುಮಾರ ಸ್ವಾಮಿ, ಬಸವರಾಜ್, ಪ್ರಸನ್ನ, ಎಳಂಗೋವನ್, ಕೇಶವಮೂರ್ತಿ, ರಾಜಶೇಖರ್, ಎಚ್.ಎಂ. ಚಂದ್ರಶೇಖರಯ್ಯ, ಕಾಟನ್ ಜಗದೀಶ್ ಇದ್ದರು.