ಶಿವಮೊಗ್ಗ,ಡಿ.26: ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿರುವ ರೈತರನ್ನು ಒಕ್ಕಲೆಬ್ಬಿಸಬಾರದು, ಭೂಮಿ ಒಡೆತನ ನೀಡಬೇಕು ಎಂದು ಆಗ್ರಹಿಸಿ ಇಂದು ಬಿಜೆಪಿ ನೇತೃತ್ವದಲ್ಲಿ ಯರಗನಾಳು, ಸದಾಶಿವಪುರ, ಮಲವಗೊಪ್ಪ ಮತ್ತು ಸುತ್ತಮುತ್ತ ಗ್ರಾಮಗಳ ರೈತ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.


ಪ್ರತಿಭಟನ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಜಾಗಗಳಲ್ಲಿ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಹಕ್ಕುಪತ್ರ ಕೂಡ ಸಿಕ್ಕಿದೆ. ಮನೆಗಳಿವೆ, ಸರ್ಕಾರಿ ಕಚೇರಿಗಳಿವೆ, ಶಾಲೆ ದೇವಸ್ಥಾನಗಳು ಇವೆ, ಜನವಸತಿ ಪ್ರದೇಶಗಳಿವೆ. ಈಗೀರುವಾಗ ಇದ್ದಕ್ಕಿದ್ದಂತೆ ಈಗ ಇವರೆಲ್ಲರನ್ನು ಒಕ್ಕಲೆಬ್ಬಿಸುವುದು ಯಾವ ನ್ಯಾಯ. ರೈತರು, ನಿವಾಸಿಗಳು ಇದರ ವಿರುದ್ಧ ಹೋರಾಡಬೇಕಾಗಿದೆ. ನಿಮ್ಮ ಹೋರಾಟಕ್ಕೆ ಬಿಜೆಪಿ ಪಕ್ಷ ಸದಾ ನಿಲ್ಲುತ್ತದೆ. ಜೀವ ಬಿಟ್ಟೇವು, ಜಾಗ ಬಿಡಲ್ಲ ಎಂಬ ನಿಮ್ಮ ಕೂಗಿಗೆ ನಾವು ಧ್ವನಿಯಾಗುತ್ತೇವೆ ಎಂದರು.

ಸರ್ಕಾರ ಮಧ್ಯ ಪ್ರವೇಶ ಮಾಡಬೇಕು.ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದೇ, ಅವರಿಗೆ ಭೂಮಿ ಒಡೆತನ ನೀಡಬೇಕು. ಬೇಕಾದರೆ, ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಪರ್ಯಾಯ ಭೂಮಿಯನ್ನು ಸರ್ಕಾರದಿಂದಲೇ ಒದಗಿಸಲಿ ಎಂದರು.

ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಶಾಸಕ ಕೆ.ಬಿ. ಅಶೋಕ್‍ನಾಯ್ಕ್, ಜಗದೀಶ್, ರತ್ನಾಕರ್ ಶೆಣೈ, ಋಷಿಕೇಶ್ ಪೈ, ದಿವಾಕರ್ ಶೇಟ್ಟಿ, ರಾಜೇಶ್ ಕಾಮತ್, ವಿನ್ಸೆಟ್ ರೋಡ್ರಿಗಸ್, ಸಮಿತಿಯ ಮುಖಂಡರಾದ ಕೃಷ್ಣಪ್ಪ, ಮಹಾದೇವ್, ನಾಗೇಂದ್ರ, ಗಿರೀಶ್, ಯತೀರಾಜ್, ದೇವರಾಜ್, ಹನುಮಮ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು, ಗ್ರಾಮಸ್ಥರು, ಕಾರ್ಮಿಕರು ಪಾಲ್ಗೊಂಡಿದ್ದರು.

error: Content is protected !!