ಬ್ರಿಟೀಷರ ವಿರುದ್ದ ಜನಜಾಗೃತಿ ಮೂಡಿಸಿದ್ದ ಲಾವಣಿ ಪದ

ಶಿವಮೊಗ್ಗ: ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಬ್ರಿಟೀಷರ ವಿರುದ್ದ ಜನಜಾಗೃತಿ ಮೂಡಿಸುವಲ್ಲಿ ಲಾವಣಿ ಪದಗಳು ಪ್ರಮುಖ ಪಾತ್ರ ವಹಿಸಿತ್ತು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮುಂಗಾರು ಜಾನಪದ ಸಂಭ್ರಮ ಮತ್ತು ಬಿ.ಎಸ್ಸಿ ಪಠ್ಯದಲ್ಲಿರುವ ಪುನೇದಹಳ್ಳಿ ಸಮ್ಮದ್ ಸಾಹೇಬರು ಬರೆದ ಮೈಲಾರ ಮಹಾದೇವ ಅವರ ಕುರಿತ ಲಾವಣಿ ಪದ್ಯ ಗಾಯನ ವಿಶ್ಲೇಷಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ ನಂತರ ಇಂದಿಗೂ ಜಾತಿ ವ್ಯವಸ್ಥೆ, ಮೌಢ್ಯತೆ, ಅಸ್ಪೃಶ್ಯತೆ ದೂರಾಗಿಲ್ಲ. ಇಂತಹ ಸಂದರ್ಭದಲ್ಲಿ ಲಾವಣಿ ಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಭಾವಿ ಮಾಧ್ಯಮವಾಗಿ ಬಳಸಿಕೊಳ್ಳಬಹುದಾಗಿದೆ. ಜನಪದ ಸಾಹಿತ್ಯಕ್ಕೆ ಅಂತಹ ದೊಡ್ಡ ಶಕ್ತಿಯಿದೆ.

ನಮ್ಮ ಪರಂಪರೆಯಿಂದ ಬಂದಿರುವ ಜಾನಪದ ಕಲೆಗಳನ್ನು ಜೋಪಾನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಜನಪದ ಕಲೆಗಳ ಕಲಿಕಾ ಶಿಬಿರ ಏರ್ಪಡಿಸಲಾಗುತ್ತಿದೆ. ವಿಜ್ಞಾನದ ಅಧ್ಯಯನದ ಜೊತೆಗೆ ಇಂತಹ ಕಲೆಗಳ ಕುರಿತು ಅಧ್ಯಯನ ಉತ್ತಮ ವಿಚಾರವಾಗಿದೆ ಎಂದು ಹೇಳಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರ್.ಎಸ್.ಶಂಕರಣ್ಣ ಮಾತನಾಡಿ, ಜನಪದ ಸಾಹಿತ್ಯಕ್ಕೆ ಸಮದ್‌ ಸಾಹೇಬರ ಕೊಡುಗೆ ಅಪಾರ. ಲಾವಣಿಯ ಮೂಲಕ ಅನೇಕ ಕಥಾತ್ಮಕ ಭಾಗವನ್ನು ಸಮಾಜಕ್ಕೆ ಕೊಡುಗೆ ನೀಡಲಾಗಿದ್ದು, ಪ್ರಮುಖವಾಗಿ ಅದರ ಲಯಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಎಸ್ಆರ್‌ಎನ್‌ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥರಾದ ಕೆ.ಲಕ್ಷ್ಮಣ್‌, ಕಜಾಪ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್‌, ಉಪನ್ಯಾಸಕರಾದ ಡಾ.ನಟರಾಜ್.ಕೆ.ಎಸ್‌, ಡಾ.ಎಸ್.ಮುಕುಂದ, ಡಾ.ಪ್ರಶೀತ್‌ ಕೇಕುಡ, ಅಂಕಿತ್.ಜಿ.ಎನ್‌, ಸಂಜಿದಾ ಬಾನು, ನಂದನ್.ಕೆ.ಎನ್‌, ಮಂಜುನಾಥ.ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!