ಬೂದಿಗೆರೆ ಏತ ನೀರಾವರಿ ಸ್ಥಳ ವೀಕ್ಷಣೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ
ಶಿವಮೊಗ್ಗ : ಮಳೆಗಾಲ ಆರಂಭವಾಗಿದ್ದರೂ ಮಳೆ ಬೀಳುತ್ತಿಲ್ಲ, ರೈತರು ಆತಂಕಗೊಂಡಿದ್ದಾರೆ, ಇಂತಹ ಸಂದರ್ಭ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಬರುತ್ತಿರುವುದನ್ನು ಕಂಡು ರೈತರು
ಅತ್ಯಂತ ಸಂತಸಗೊಂಡಿದ್ದಾರೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಕೇಂದ್ರ ಸರಕಾರ ಸಾಧನೆಗಳು ಹಾಗೂ ಯೋಜನೆಗಳನ್ನು ತಿಳಿಸುವ ಸಲುವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಕಾಸ ತೀರ್ಥಯಾತ್ರೆ ಅಂಗವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬೂದಿಗೆರೆ ಏತ ನೀರಾವರಿ ಸ್ಥಳ ವೀಕ್ಷಣೆ ಮಾಡಿ, ಕೊಮ್ಮನಾಳು ಕೆರೆಗೆ ಗಂಗಾ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಳೆಗಾಲ ಆರಂಭವಾಗಿದ್ದರೂ ರೈತರೂ ಇನ್ನೂ ಬಿತ್ತನೆ ಕಾರ್ಯಗಳನ್ನು ಮಾಡ್ತುತಿಲ್ಲ. ಇಡೀ ರೈತ ಸಮುದಾಯ ಆತಂಕಗೊಂಡಿದೆ. ಬರದ ಮುನ್ಸೂಚನೆಯನ್ನು ನೀಡುವಂತಿದೆ, ಇಂತಹ ಸಂದರ್ಭ ಸಂದರ್ಭದಲ್ಲಿ ಏತ ನೀರಾವರಿ ಯೋಜನೆಯು ಬೂದಿಗೆರೆ ಭಾಗದ 9 ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ನೀರು ಹರಿದು ಬರುತ್ತಿರುವುದು ರೈತರ ಮೊಗದಲ್ಲಿ ಮಂದಹಾಸವನ್ನು ತಂದಿದ್ದು, ಇದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಈ ಹಿಂದೆ ಆಡಳಿತದ ಅವಧಿಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹಣವನ್ನು ಬಿಡುಗಡೆ ಮಾಡಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಕೊಮ್ಮನಾಳು ಗ್ರಾಮದ ಕೆರೆಗೆ ನೀರು ಹರಿದು ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಹಾಗೂ ರೈತರೂ ಸೇರಿ ಎಲ್ಲರೂ ಹೆಮ್ಮೆ ಪಡುವ ಸಂಗತಿ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಆಡಳಿತವಿದ್ದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬೂದಿಗೆರೆ ಭಾಗದ ನೂರಾರು ಎಕರೆ ಜಮೀನು ಹಾಗು ರೈತರಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಹಿಂದೆ ಶಾಸಕರಾಗಿದ್ದ ಕೆ.ಬಿ.ಅಶೋಕ್ ನಾಯ್ಕ್, ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ಐದು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗಿದೆ, ಈ ಪೈಕಿ ಅಪೂರ್ಣಗೊಂಡ ಕಾಮಗಾರಿ ಹಾಗೂ ಹೊಸ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕಾಮಗಾರಿಗಳು ಪೂರ್ಣಗೊಂಡಿರುವುದು ಐತಿಹಾಸಿಕ ಸಂದರ್ಭವೆಂದೇ ಹೇಳಬಹುದು. ಹಾಗೆಯೇ ಸುಮಾರು 350 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಹೊಸಳ್ಳಿ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ರೀತಿ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬದ ಮೂಗೂರು, ಮೂಡಿ ಏತ ನೀರಾವರಿ ಯೋಜನೆಗಳನ್ನು ನೀಡುವ ಮೂಲಕ ರೈತರು ಬುದುಕ ಹಸನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಹಾಗೆಯೇ ಬೈಂದೂರಿನ ಸವಕೂರು ಸಿದ್ದಾಪುರ ಹೀಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 1500 – 2000 ಕೋಟಿ ಗಳಿಗಿಂತ ಹೆಚ್ಚು ರೂ.ಗಳನ್ನು ಬಿಜೆಪಿ ಸರಕಾರ ಆಡಳಿತ ಅವಧಿಯಲ್ಲಿ ವೆಚ್ಚ ಮಾಡಲಾಗಿದೆ. ಯೋಜನೆಗಳ ಮೌಲ್ಯ ಈಗ ಅರ್ಥವಾಗುತ್ತಿದೆ, ಇದರಿಂದ ರೈತ ರಿಗೆ ಅನುಕೂಲವಾಗುತ್ತಿದೆ ಎಂದರು.
ಈ ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ಸವಾಲುಗಳು ಎದುರಾದವು, ಕಾಮಗಾರಿಗಳನ್ನು ತಡೆಯುವಂತಹ ಷಡ್ಯಂತ್ರಗಳೂ ನಡೆದವು. ಆದರೆ, ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ಅನ್ನದಾತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಅಳವಡಿಸಲಾಗಿದ್ದ ಪೈಪ್ ಲೈನ್ ಮೇಲೆ ಬಹುತೇಕ ರೈತರು ತೋಟಗಳನ್ನು ಕಟ್ಟಿಕೊಂಡಿದ್ದರು. ಅಂದು ಹಾಕಿದ್ದ ಪಿವಿಸಿ ಪೈಪ್ ತೆರವುಗೊಳಿಸಿ ಹೊಸ ಸ್ಟೀಲ್ ಪೈಪ್ ಅಳವಡಿಕೆ ಮಾಡಲಾಗಿದೆ. ಆದರೆ ರೈತರಿಗೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಎಲ್ಲ ರೈತರು ಸಂಪೂರ್ಣ ಸಹಕಾರವನ್ನುನೀಡಿದ್ದಾರೆ. ಅದರ ಫಲವಾಗಿ ಇಂದು ಎಲ್ಲ ರೈತರೂ ಬೆಳೆಗಳಿಗೆ ನೀರನ್ನು ಉಣಿಸುವಂತಹ ಸೌಭಾಗ್ಯ ದೊರೆತಂತಾಗಿದೆ. ಯೋಜನೆಗೆ ಸಹಕರಿಸಿದ ರೈತರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಮುಂದಿನ ದಿನಗಳಲಿ ಉತ್ತಮ ಮಳೆ ಆಗಲಿ, ರೈತರು ನೆಮ್ಮದಿಯ ಜೀವನ ನಡೆೆಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ಜಿಲ್ಲಾ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಅಶೋಕ್ ಮೂರ್ತಿ, ಗ್ರಾಮಾಂತರ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಮತ್ತಿತರ ಪ್ರಮುಖರು ಹಾಗೂ ಮುಖಂಡರು ಹಾಜರಿದ್ದರು.