ಶಿವಮೊಗ್ಗ, ಫೆ.05 : ಇದೇ ಫೆಬ್ರವರಿ 24 ಮತ್ತು 25ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿ ನಗರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಯುವ ಜನರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಮೇಳದ ವೆಬ್ಸೈಟ್ ಅನಾವರಣಗೊಳಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೃಹತ್ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಖಾಸಗಿ ಕ್ಷೇತ್ರದ 120ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. ಉತ್ಪಾದನಾ ವಲಯ ಮತ್ತು ಅಟೋ ಮೊಬೈಲ್ ಕ್ಷೇತ್ರದ ಕಂಪೆನಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಮೇಳದಲ್ಲಿ ಆಯ್ಕೆ ಮಾಡಲಾಗುವುದು. ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವೀಧರರು, 18ರಿಂದ 40ವರ್ಷ ವಯೋಮಿತಿಯವರು ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ವೆಬ್ಸೈಟ್ ಅನಾವರಣ: ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ಅನುಕೂಲವಾಗುವಂತೆ ವೆಬ್ಸೈಟ್ www.shimogaudyogamela.inಸಿದ್ಧಪಡಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಸಂದರ್ಶನಕ್ಕೆ ಸಂಬಂಧಿಸಿದ ತರಬೇತಿಯನ್ನು ಪಡೆದುಕೊಳ್ಳಲು ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸಲು ವೆಬ್ಸೈಟ್ನಲ್ಲಿ ನೇರವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಯೋಗ ಮೇಳದ ಸಂಪೂರ್ಣ ವಿವರ ಇದರಲ್ಲಿ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲ್ ವಿಳಾಸ shivamoggaudyogamela@gmail.com , ದೂರವಾಣಿ ಸಂಖ್ಯೆ 8762778408, 9448787752, 7892548980, 08182-255293 ಸಂಪರ್ಕಿಸಬಹುದು. ಪ್ರವೇಶ ಉಚಿತವಾಗಿರುತ್ತದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಕೌಶಲ್ಯಾಧಿಕಾರಿ ಗಣಪತಿ ನಾಯಕ್, ಉದ್ಯೋಗಾಧಿಕಾರಿ ಖಲಂದರ್ ಖಾನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.