ಶಿವಮೊಗ್ಗ, : ತೋಟಗಾರಿಕೆ ಇಲಾಖೆಯು ದ್ರಾಕ್ಷಾರಸ ಮಂಡಳಿಯ ಸಹಯೋಗದೊಂದಿಗೆ ಫೆಬ್ರವರಿ 01ರಿಂದ 03ರವರೆಗೆ ನಗರದ ಹಳೇ ಜೈಲ್ ಆವರಣದಲ್ಲಿ ಮೂರು ದಿನಗಳ ಅಂತರಾಷ್ಟ್ರೀಯ ದ್ರಾಕ್ಷಾರಸ ಉತ್ಸವ-2019ನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಅವರು ಹೇಳಿದರು.
ಅವರು ಇಂದು ಈ ಸಂಬಂಧ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ ಮಾತನಾಡುತ್ತಿದ್ದರು. ಈ ವೈನ್‍ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಸುಮಾರು 10-12ವೈನರಿಗಳು ಭಾಗವಹಿಸಿ 150ಕ್ಕೂ ಹೆಚ್ಚಿನ ಬ್ರಾಂಡ್‍ಗಳನ್ನು ಪ್ರದರ್ಶಿಸಲಾಗುವುದು. ಹಾಗೂ ಹಳೆಯ ವೈನ್ ಪ್ರದೇಶಗಳಾದ ಯುರೋಪ್ ಖಂಡ ಮತ್ತು ಹೊಸ ವೈನ್ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲಿ ಮತ್ತು ಅಮೇರಿಕಾ ಹಾಗೂ ಇತರೆ ದೇಶಗಳ ವೈನ್ ಪ್ರದರ್ಶನ ಮತ್ತು ಶೇ. 10ರ ರಿಯಾಯಿತಿ ದರದಲ್ಲಿ ಕೇವಲ ದ್ರಾಕ್ಷಿ ಹಣ್ಣಿನಿಂದ ತಯಾರಿಸಿದ ವೈನ್‍ಗಳ ಮಾರಾಟ ಮಾಡಲಾಗುವುದು ಎಂದವರು ನುಡಿದರು.
ಆರೋಗ್ಯಕರ ದೃಷ್ಠಿಯಿಂದ ವೈನ್ ಬಳಕೆಯನ್ನು ಉತ್ತೇಜಿಸುವ ದಿಸೆಯಲ್ಲಿ, ವೈನ್ ದ್ರಾಕ್ಷಿ ಬೆಳೆಯುವ ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ವೈನ್ ತಯಾರಕರು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ವೈನ್ ಸ್ವಾದಿಸುವಾಗ ಬಳಸುವ ಸೂಕ್ತ ಆಹಾರ ತಿನಿಸು ಮಳಿಗೆಗಳು ಪಾಲ್ಗೊಳ್ಳಲಿವೆ ಎಂದವರು ನುಡಿದರು.
ರಾಜ್ಯದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಿಕರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು ಮತ್ತು ರಾಜ್ಯದಲ್ಲಿ ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅನುವು ಮಾಡಿಕೊಡುವುದೂ ಕೂಡ ಈ ಮೇಳದ ಉದ್ದೇಶಗಳಲ್ಲೊಂದಾಗಿದೆ ಎಂದವರು ನುಡಿದರು.
ಪ್ರಸ್ತುತ ರಾಜ್ಯದಲ್ಲಿ ಸುಮಾರು 210ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆರಂಭದಲ್ಲಿ ರಾಜ್ಯದಲ್ಲಿ ಕೆಲವೇ ಇದ್ದ ವೈನ್ ಉತ್ಪಾದನಾ ಘಟಕಗಳು ಈಗ ನೂರರ ಗಡಿ ದಾಟಿವೆ. ಪಾನೀಕರ ಸಂಖ್ಯೆ 85ಲಕ್ಷ ದಾಟಿದೆ ಎಂದವರು ನುಡಿದರು.
ವೈನ್ ನಿಯಮಿತವಾದ ಸೇವನೆ ಆರೋಗ್ಯವೃದ್ಧಿಗೆ ಸಹಕಾರಿಯಾಗಲಿದೆ. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣ, ಹುಣ್ಣುಗಳ ನಿಯಂತ್ರಣ, ಕ್ಯಾನ್ಸರ್ ತಡೆಗಟ್ಟುವಿಕೆ, ಮಹಿಳೆಯರ ಎಲುಬುಗಳ ಬಲವರ್ಧನೆ, ರಕ್ತದೊತ್ತಡ, ಮಬಲದ್ದತೆ, ನರರೋಗ ಮುಂತಾದ ಕಾಯಿಲೆಗಳ ನಿಯಂತ್ರಣಕ್ಕೆ ಇದು ಸಹಕಾರಿಯಾಗಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಆರ್.ಯೋಗೀಶ್ ಅವರು ಮಾತನಾಡಿ, ಈ ಮೇಳದಲ್ಲಿ ಇತರೆ ಆಹಾರ ಮಳಿಗೆಗಳನ್ನು ತೆರೆಯಲಾಗುವುದು. ಪ್ರತಿದಿನ ಸಂಜೆ ಆಹ್ವಾನಿತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ರೂ.20/-ಗಳನ್ನು ನಿಗಧಿಪಡಿಸಲಾಗಿದೆ ಎಂದರು.
ಫೆಬ್ರವರಿ 01ರಂದು ಸಂಜೆ 6ಗಂಟೆಗೆ ರಾಜ್ಯ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ರಾಜ್ಯ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರುವರು.