News Next

ಶಿವಮೊಗ್ಗ, ಆ.05 : ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.

ಅಲ್ಪಸಂಖ್ಯಾತರಿಗೆ ಉದ್ಯೋಗವಕಾಶ ಕಲ್ಪಿಸಲು ಪೂರಕವಾಗಿ ಕೌಶಲ್ಯಾಭಿವೃದ್ಧಿ ತರಬೇತಿ, ವಸತಿ ಯೋಜನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳು, ಕೈಗಾರಿಕೆ, ಬ್ಯಾಂಕ್‍ಗಳ ಮೂಲಕ ಹಣಕಾಸು ನೆರವು, ಎನ್‍ಯುಎಲ್‍ಎಂ, ಎನ್‍ಆರ್‍ಎಲ್‍ಎಂ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಧರ್ಮಪ್ಪ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2,70939 ಅಲ್ಪಸಂಖ್ಯಾತರಿದ್ದು, ಇವರಲ್ಲಿ 2,34664 ಮುಸ್ಲಿಮರು, 26531 ಕ್ರಿಶ್ಚಿಯನ್ನರು, 9234 ಜೈನರು, 400 ಸಿಖ್ಖರು ಮತ್ತು 120 ಬೌದ್ಧ ಧರ್ಮೀಯರು ಇದ್ದಾರೆ. ಎಪ್ರಿಲ್‍ನಿಂದ ಜೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ 2298 ಬಾಣಂತಿಯರಿಗೆ ಹಾಗೂ 2653 ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಲಾಗಿದೆ. ಈ ಅವಧಿಯಲ್ಲಿ ಶಾಲೆಯಿಂದ ಹೊರಗುಳಿದಿರುವ 9ಮಕ್ಕಳನ್ನು ಗುರುತಿಸಲಾಗಿದ್ದು, ಅವರನ್ನು ಮರಳಿ ಶಾಲೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಎನ್‍ಎಸ್‍ಪಿ ಪೋರ್ಟಲ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಒಟ್ಟು 27959 ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪೈಕಿ ಕೇಂದ್ರ ಸರ್ಕಾರದಿಂದ 13615 ವಿದ್ಯಾರ್ಥಿಗಳಿಗ ನೇರವಾಗಿ ಅವರ ಬ್ಯಾಂಕು ಖಾತೆಗೆ ವಿದ್ಯಾರ್ಥಿ ವೇತನ ಮೊತ್ತ ಜಮಾ ಮಾಡಲಾಗಿದೆ. ಎಸ್‍ಎಸ್‍ಪಿ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು.

ಕೊಳಚೆ ನಿರ್ಮೂಲನೆ ಮಂಡಳಿಯ ಮೂಲಕ ಅನುಷ್ಟಾನಗೊಳಿಸಲಾಗುತ್ತಿರುವ ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಬ್ಯಾಂಕಿನಿಂದ ಮತ್ತು ಮಂಡಳಿಯಿಂದ ಹಣಕಾಸು ನೆರವು ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗುತ್ತಿರುವ ಯೋಜನೆಗಳ ಮಾಹಿತಿಯನ್ನು ಪ್ರಚಾರ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಹೆಚ್.ಟಿ.ಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!