ಶಿವಮೊಗ್ಗ. ಮೇ 02 : ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಕೃತಿವಿಕೋಪಗಳ ವ್ಯವಸ್ಥಿತ ನಿರ್ವಹಣೆಯ ತುರ್ತು ಕಾರ್ಯಾಚರಣೆ ಕೈಗೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅಗತ್ಯ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಅಧ್ಯಕ್ಷ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ, ಆಡಳಿತ ನಿರ್ವಹಣಾ ಸಂಸ್ಥೆ ಮೈಸೂರು ಮತ್ತು ಜಿಲ್ಲಾಡಳಿತ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ, ವಿಕೋಪ ಮಿತಗೊಳಿಸುವಿಕೆ, ಪೂರ್ವಸಿದ್ಧತೆ ಹಾಗೂ ಸ್ಪಂದನಾ ಯೋಜನೆಗಳ ಕುರಿತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ನಗರದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಹಿತಕರ ಘಟನೆಗಳು ಸಂಭವಿಸುವ ಮುನ್ನವೇ ಅವುಗಳ ವ್ಯವಸ್ಥಿತ ನಿರ್ವಹಣೆಗಾಗಿ ಅವಶ್ಯಕ ಪೂರ್ವಸಿದ್ಧತೆ ಹಾಗೂ ಜವಾಬ್ದಾರಿ ವಹಿಸಿಕೊಳ್ಳುವುದು ಬಹುಮುಖ್ಯ. ವಿಕೋಪದಲ್ಲಿ ಸಂತ್ರಸ್ಥರಾದ ಜನ-ಜಾನುವಾರುಗಳು, ಆಸ್ತಿ-ಪಾಸ್ತಿಗಳ ರಕ್ಷಣೆ, ಪುನರ್ವಸತಿ ಸೌಲಭ್ಯ, ನಂತರದಲ್ಲಿ ನಿರ್ವಹಿಸಲೇಬೇಕಾದ ವಿಷಯಗಳ ಕುರಿತು ಅಧಿಕಾರಿಗಳು ಅರಿತುಕೊಂಡಿರುವುದು ಹಾಗೂ ಮಾನಸಿಕವಾಗಿ ಸಿದ್ಧರಾಗಿರುವುದು ಅತ್ಯಗತ್ಯವಾಗಿದೆ ಎಂದವರು ನುಡಿದರು.
ತುರ್ತು ಸಂದರ್ಭಗಳಲ್ಲಿ ಅಲ್ಪಾವಧಿಯಲ್ಲಿ ಸಂತ್ರಸ್ಥರಿಗೆ ನೀಡುವ ಸೇವೆ, ಸೌಲಭ್ಯಗಳ ಕುರಿತು ಎಚ್ಚರಿಕೆ ವಹಿಸಬೇಕಾಗುವುದು. ಸ್ವಲ್ಪ ಮಟ್ಟಿನ ನಿರ್ಲಕ್ಷ್ಯ ವಹಿಸಿದರೂ ಆಗುವ ಅನಾಹುತ ಘೋರವಾಗಿರಲಿದೆ ಎಂದ ಅವರು, ವಿಕೋಪಕ್ಕೆ ಒಳಪಡುವ ರಸ್ತೆ, ನದಿ, ಕೆರೆ-ಕಟ್ಟೆ ಕಾಲುವೆಗಳು, ಬೆಂಕಿ ಇತ್ಯಾದಿ ವಿಷಯಗಳಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಜಾಣತನದ ಹೆಜ್ಜೆ ಇಡಬೇಕು. ಅಂತೆಯೇ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ಭೌಗೋಳಿಕ ಪರಿಚಯ ಹೊಂದಿರಬೇಕು. ಕೆಲವು ಸಂದರ್ಭಗಳಲ್ಲಿ ಗಂಜಿಕೇಂದ್ರ ಸ್ಥಾಪನೆ, ಲಘು ಮತ್ತು ಭಾರೀ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇರುವ ಪರ್ಯಾಯ ರಸ್ತೆ ಮಾರ್ಗಗಳು, ಎತ್ತರದ ಸ್ಥಳಗಳ ಪರಿಚಯ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಆರೋಗ್ಯ ಕೇಂದ್ರಗಳು, ಆಹಾರ ಪೂರೈಕೆ, ಜಾನುವಾರುಗಳಿಗೆ ಮೇವು ಇನ್ನೂ ಮುಂತಾದ ಅನೇಕ ವಿಷಯಗಳಲ್ಲಿ ತಕ್ಷಣದ ಸ್ಪಂದನೆ ಅಗತ್ಯವಿದ್ದು, ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಕ್ಕೆ ತುರ್ತು ನೆರವಿಗೆ ಧಾವಿಸಬೇಕು. ಎಲ್ಲಾ ಸರ್ಕಾರಿ ಸಂಸ್ಥೆಗಳು, ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಸಂಕುಚಿತ ಮನಸ್ಥಿತಿಯಿಂದ ಹೊರಬಂದು ಎಲ್ಲರೂ ಒಂದುಗೂಡಿ ಅತ್ಯಂತ ಜವಾಬ್ದಾರಿಯಿಂದ ವಿಕೋಪ ನಿರ್ವಹಣಾ ಕಾರ್ಯ ಕೈಗೊಳ್ಳಬೇಕು. ಇದರೊಂದಿಗೆ ವಿಕೋಪ ನಿರ್ವಹಣೆಗೆ ಜಿಲ್ಲೆಯಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಸಲಕರಣೆಗಳ ಮಾಹಿತಿ ಸಂಗ್ರಹಿಸಿಟ್ಟುಕೊಂಡಿರಬೇಕೆಂದವರು ನುಡಿದರು.
ವಿಕೋಪ ಎಂಬುದು ಯಾವುದೋ ಒಂದು ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಸಂದರ್ಭದಲ್ಲಿ ನೊಂದವರಿಗೆ ಸಾಂತ್ವನ ಮತ್ತು ಮಾನವೀಯ ನೆರವು ಮಾತ್ರ ನೀಡಬಹುದಾಗಿದೆ ಎಂದ ಅವರು ಸಮಸ್ಯೆಗಳು ಜನಸಾಮಾನ್ಯರ ಮೂಲಕ ಅಧಿಕಾರಿಗಳ ಗಮನಕ್ಕೆ ಬರುವ ಮುನ್ನವೇ ಅಧಿಕಾರಿಗಳು ಸಮಸ್ಯೆಗಳ ಇತ್ಯರ್ಥಕ್ಕೆ ಧಾವಿಸಬೇಕು. ಈ ಸಂದರ್ಭದಲ್ಲಿ ಕಳೆದ ನಾಲ್ಕಾರು ವರ್ಷಗಳಲ್ಲಿನ ಅಂಕಿಸಂಖ್ಯೆಗಳನ್ನು ಎದುರಿಗಿಟ್ಟುಕೊಂಡು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದವರು ನುಡಿದರು.
ಕಾರ್ಯಾಗಾರದಲ್ಲಿ ಮೈಸೂರು ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕ ಅಲೆಕ್ ಲೋಬೋ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‍ಖಾನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!