ಸಾಹಸಮಯ ಚಟುವಟಿಕೆಗಳಿಗೆ ಸೂಕ್ತ ಜಾಗ ಹೊನ್ನೆಮರಡು. ಹಚ್ಚ ಹಸಿರಿನ ನಡುವೆ ಶರಾವತಿ ನದಿಯ ಹಿನ್ನೀರು ಪ್ರದೇಶದಲ್ಲಿ ಕಯಾಕಿಂಗ್, ಕ್ಯಾನೋಯಿಂಗ್, ಕ್ಯಾಂಪಿಂಗ್ ಮತ್ತು ಬೋನಾಫೈರ್ ನಂತಹ ಸಾಹಸ ಚಟುವಟಿಕೆಗಳನ್ನು ನಡೆಸಬಹುದಾಗಿದೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಪ್ರವಾಸಿ ತಾಣಗಳ ಸ್ವರ್ಗ. ಪ್ರವಾಸಿಗರು ಹೆಚ್ಚು ಇಷ್ಟಪಡುವ ಪ್ರವಾಸಿ ತಾಣಗಳಲ್ಲಿ ಶಿವಮೊಗ್ಗ ಪ್ರಮುಖವಾಗಿದೆ. ಶಿವಮೊಗ್ಗ ಜಿಲ್ಲೆಯ ನೈಸರ್ಗಿಕ ಹಾಗೂ ಪ್ರಾಕೃತಿಕ ಚೆಲುವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಲಕ್ಷಾಂತರ ಪ್ರವಾಸಿಗರು ಮಲೆನಾಡಿನ ಪ್ರವಾಸಿ ತಾಣಗಳಿಗೆ ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ. ಶಿವಮೊಗ್ಗದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಇರುವ ಹೊನ್ನೆಮರಡು ಸಹ ಒಂದು.
ಶರಾವತಿ ಹಿನ್ನೀರಿನ ಪ್ರದೇಶದ ಹೊನ್ನೆಮರಡು ಪ್ರಕೃತಿಪ್ರಿಯರಿಗೆ ಅಚ್ಚುಮೆಚ್ಚಿನ ಸ್ಥಳ. ಇಲ್ಲಿ ಕಣ್ಣು ಹಾಯಿಸಿದಷ್ಟು ನೀರು, ಪ್ರಕೃತಿ ಸೌಂದರ್ಯ, ಪ್ರಶಾಂತವಾದ ವಾತಾವರಣ ಇದೆ. ಸಾಹಸ ಚಟುವಟಿಕೆಗಳ ತಾಣ ಕೂಡ ಇದಾಗಿದೆ. ಸೂರ್ಯಾಸ್ಥಮಾನ ವೀಕ್ಷಣೆ ಇಲ್ಲಿನ ಮತ್ತೊಂದು ವಿಶೇಷ.
ಹೊನ್ನೆಮರಡು ಪ್ರವಾಸಿ ತಾಣದಲ್ಲಿ ಹೈಕಿಂಗ್, ಕ್ಯಾನೋಯಿಂಗ್, ಕಯಾಕಿಂಗ್, ಕೊರಾಕಲ್ ಬೋಟ್ ರೈಡ್ ಮತ್ತು ವಿವಿಧ ಸಾಹಸ ಚಟುವಟಿಕೆಗಳನ್ನು ಒಳಗೊಂಡಿರುವ ಪ್ಯಾಕೇಜ್ ಇರಲಿವೆ. ಎಲ್ಲ ಸಾಹಸ ಚಟುವಟಿಕೆಗಳು ಸುರಕ್ಷತಾ ಕ್ರಮಗಳು ಮತ್ತು ಪ್ರತಿಯೊಬ್ಬರ ಸುರಕ್ಷತೆ ಬಗ್ಗೆ ಗಮನ ವಹಿಸಲಾಗುತ್ತದೆ. ಪರಿಸರ ಸ್ನೇಹಿ ಪ್ರವಾಸಿ ತಾಣ ಆಗಿರುವ ಈ ಪ್ರದೇಶದಲ್ಲಿ ಧೂಮಪಾನ ಮತ್ತು ಮಧ್ಯಪಾನಕ್ಕೆ ಅವಕಾಶವಿಲ್ಲ.
ಸುತ್ತ ಮುತ್ತ ಬೆಟ್ಟಗಳಿಂದ ಆವೃತವಾಗಿರುವ ಹೊನ್ನೆಮರಡುವಿನ ಸುಂದರ ತಾಣದಲ್ಲಿ ಸಾಹಸ ಚಟುವಟಿಕೆ ನಡೆಸುವುದು ವಿಶೇಷ ಅನುಭವ ಒದಗಿಸುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಕಯಾಕಿಂಗ್ ಮತ್ತು ಕೋರಾಕಲ್ ಬೋಟಿಂಗ್ ರೈಡ್ ನಡೆಸಬಹುದಾಗಿದೆ. ನಕ್ಷತ್ರ ವೀಕ್ಷಣೆ ಮತ್ತು ಬೋನಾಫೈರ್ ಹೆಚ್ಚು ಖುಷಿ ನೀಡುತ್ತದೆ.
ಫೋಟೋಶೂಟ್ ಮಾಡಿಕೊಳ್ಳಲು ಸಹ ಉತ್ತಮ ಪ್ರಾಕೃತಿಕ ತಾಣ. ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ ಛಾಯಾಗ್ರಾಹಕರಿಗೂ ಹೊನ್ನೆಮರಡು ಅದ್ಭುತ ಸ್ಥಳವಾಗಿದೆ. ಪಕ್ಷಿ ವೀಕ್ಷಕರ ಸ್ವರ್ಗ ಎಂತಲೂ ಕರೆಯುತ್ತಾರೆ.
ತಲುಪುವುದು ಹೇಗೆ: ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಹೊನ್ನೆಮರಡು ಪ್ರವಾಸಿ ತಾಣವು 98 ಕೀಮಿ ದೂರ ಇದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರದಿಂದ 28 ಕೀಮಿ ದೂರದಲ್ಲಿದೆ. ತಾಳಗುಪ್ಪದಿಂದ 10 ಕೀಮಿ ದೂರದಲ್ಲಿದೆ.
ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಹೊನ್ನೆಮರಡುವಿನಲ್ಲಿ ಸೂರ್ಯಾಸ್ಥಮಾನ ವೀಕ್ಷಿಸಲು ಸಮಯ ಮೀಸಲಿಟ್ಟುಕೊಂಡು ಪ್ರವಾಸದ ಯೋಜನೆ ಹಾಕಿಕೊಳ್ಳಬಹುದು. ಸಾಹಸಿ ಚಟುವಟಿಕೆ ಇಷ್ಟಪಡುವವರು ಒಂದು ದಿನ ಪ್ರವಾಸದ ಪ್ಲಾನ್ ರೂಪಿಸಿಕೊಳ್ಳಬಹುದು.
ಮಳೆಗಾಲದ ನಂತರದ ಸಮಯ ಪ್ರವಾಸಕ್ಕೆ ಸೂಕ. ದಿನನಿತ್ಯದ ನಗರ ಜೀವನ ಹಾಗೂ ಒತ್ತಡ ಜೀವನಶೈಲಿಯಿಂದ ಮುಕ್ತರಾಗಿ ವಿಶ್ರಾಂತಿ ಪಡೆಯಲು ಹಾಗೂ ಪ್ರಕೃತಿ ಸೊಬಗನ್ನು ಆನಂದಿಸಲು ಹೊನ್ನೆಮರಡು ಸೂಕ್ತ ಪ್ರವಾಸಿ ತಾಣ.
ಹೊನ್ನೆಮರಡುವಿನಲ್ಲಿ ಕ್ಯಾಂಪ್ ಮಾಡಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ ಭಾರತೀಯ ಸಾಹಸ ಸಮನ್ವಯ ಕೇಂದ್ರದ ಡಾ. ಎಸ್.ಎಲ್.ಎನ್.ಸ್ವಾಮಿ ಅವರನ್ನು (ಮೊಬೈಲ್ ಸಂಖ್ಯೆ: 9448485508) ಸಂಪರ್ಕಿಸಬಹುದಾಗಿದೆ.
ನೀವು ಒಮ್ಮೆ ಭೇಟಿ ನೀಡಿ.