ಶಿವಮೊಗ್ಗ, ಜೂನ್. 07 : ಪ್ರಕೃತಿ ಅಮೂಲ್ಯವಾದದ್ದು ಅದರ ಮೇಲಾಗುತ್ತಿರುವ ಮಾನವನ ದಾಳಿಯಿಂದ ಇಂದು ಜಾಗತೀಕ ತಾಪಮಾನ ಕುಡಿಯುವ ನೀರಿನ ಸಮಸ್ಯೆ ಮುಂತಾದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಇನ್ನೂ ನಾವು ಎಚ್ಚೆತ್ತುಕೊಂಡು ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅದನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗದೆ ಹೋದರೆ ಇನ್ನು ಭೀಕರ ಪರಿಣಾಮವನ್ನು ಎದುರಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ ಹಿರೇಮಠ್ ಹೇಳಿದರು.
ನಗರದ ಆದಿಚುಂಚನಗಿರಿ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಮಿತ್ರ ಶಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿಯ ನಾಶದಿಂದ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅನೇಕ ಪ್ರಾಣಿ ಪಕ್ಷಿಗಳು ಸಹ ನಶಿಸುತ್ತಿವೆ. ನಾವು ಬಳಸುವ ಕಾಗದ ಹಾಗೂ ಇನ್ನಿತರೆ ವಸ್ತುಗಳಿಗಾಗಿ ಲಕ್ಷಾಂತರ ಮರಗಳು ನಾಶಗೊಳ್ಳುತ್ತಿವೆ. ಸಹಸ್ರ ಟನ್ಗಳಷ್ಟು ಪ್ಲಾಸ್ಟಿಕ್ ಸಮುದ್ರ ಸೇರುತ್ತಿದ್ದು ಜಲಚರ ಜೀವಿಗಳಿಗೂ ಮಾರಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಸುಮಂಗಲ ಪಿ ಕುಚಿನಾಡ, ಕಾನೂನು ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಹಿರಿಯ ಪರಿಸರವಾದಿ ಮುರುಳೀಧರ್ ಬಿ.ಎಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.