ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗವು ಇಫ್ಕೋ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 17-09-2020 ರಂದು ‘ಪೋಷಣೆ ಅಭಿಯಾನ’ ಕಾರ್ಯಕ್ರಮವನ್ನು ಶಿವಮೊಗ್ಗ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಡಾ.ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಈ ಸೆಪ್ಟಂಬರ್ ತಿಂಗಳನ್ನು ಪೋಷಣೆ ಮಾಸ ಎಂದು ಆಚರಿಸಲಾಗುತ್ತಿದ್ದು, ಇದರ ಪ್ರಯುಕ್ತ ಈ ದಿನ ‘ಪೋಷಣೆ ಅಭಿಯಾನ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಉದ್ದೇಶವೆಂದರೆ, ಮಕ್ಕಳು, ಮಹಿಳೆಯರು, ಗರ್ಭಿಣಿ ಸ್ತ್ರೀಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ದಿನ ನಿತ್ಯದ ಅಹಾರದಲ್ಲಿ ಪೋಷಕಾಂಶ ಭರಿತ ಆಹಾರ ಸೇವನೆಯ ಪ್ರಾಮುಖ್ಯತೆಯನ್ನು ತಿಳಿಸುವುದಾಗಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕು|| ಸ್ಮಿತ. ಜಿ.ಬಿ., ವಿಜ್ಞಾನಿ (ತೋಟಗಾರಿಕೆ) ಇವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಪೌಷ್ಠಿಕ ಆಹಾರ ಸೇವೆನೆಯು ಉತ್ತಮ ಆರೋಗ್ಯಕ್ಕೆ ಬುನಾದಿ ಎಂದು ತಿಳಿಸುತ್ತಾ, ಗರ್ಭಿಣಿಯರಲ್ಲಿ ಪೋಷಕಾಂಶ ಕೊರತೆಯಿಂದ ಅಪೌಷ್ಠಿಕತೆಯಿಂದ ಕೂಡಿದ ಮಗುವಿನ ಜನನವಾಗಿ ಮುಂದೆ ಮಗುವಿನ ಬೆಳವಣಿಗೆಯಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಆರೋಗ್ಯಯುತ ಮಗು ಪಡೆಯಲು ಗರ್ಭಿಣಿಯರು ಕಬ್ಬಿಣಾಂಶ, ವಿಟಮಿನ್‍ಗಳು, ಮೊಳಕೆ ಭರಿಸಿದ ಕಾಳುಗಳು, ಬೇಳೆ, ಮೊಟ್ಟೆ, ಮಾಂಸ, ಹಾಲು, ಮೀನು, ಹಸಿರು ಸೊಪ್ಪು ಮತ್ತು ವಿವಿಧ ಬಣ್ಣಗಳ ಜೀವಸತ್ವ ಭರಿತ ತರಕಾರಿಗಳನ್ನು ಸೇವಿಸುವುದು ಉತ್ತಮ. ಮಗುವಿನ ಜನನದ ನಂತರವೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಬೆಳೆವಣಿಗೆಗೆ ಹಾಲುಣಿಸುವ ತಾಯಂದಿರುವ ಪೌಷ್ಠಿಕ ಆಹಾರ ಸೇವಿಸಬೇಕೆಂದರು.
ಶ್ರೀ ಸಿದ್ದಾರೂಢ ಪಡೆಪ್ಪಗೋಳ, ಹಿರಿಯ ಸಂಶೋಧನಾ ಸಹಾಯಕರು, ಕೃಷಿ ವಿಜ್ಞಾನ ಕೇಂದ್ರ, ಇವರು ಮಾತನಾಡುತ್ತಾ, ಮಕ್ಕಳು, ವಯಸ್ಕ ಮಹಿಳೆಯರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ತಮ್ಮ ದಿನ ನಿತ್ಯದ ಆಹಾರದ ಪದ್ಧತಿಯಲ್ಲಿ ವಿಟಮಿನ್, ಶರ್ಕರ-ಪಿಷ್ಟಗಳುಳ್ಳ ಆಹಾರ, ಹಣ್ಣು, ತರಕಾರಿ, ಮೊಟ್ಟೆ, ಮೀನು ಮಾಂಸ, ಹಾಲು ಇವುಗಳನ್ನು ಸೇವಿಸುವುದರ ಜೊತೆಗೆ ರಾಗಿ, ಜೋಳ, ಗೋಧಿ ಮತ್ತು ಇತರೆ ಸಿರಿಧಾನ್ಯಗಳನ್ನೂ ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ. ಇತ್ತೀಚೆಗೆ ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಇದು ಕುಪೋಷಣೆಯಿಂದ ಕೂಡಿದ ಮಗುವಿನ ಜನನದ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ಪಾಲಕ್, ಮೆಂತೆ, ರಾಜಗಿರಿ ಇನ್ನು ಮುಂತಾದ ಹಸಿರು ಸೊಪ್ಪು ತಕಾರಿಗಳು, ಮೊಳಕೆ ಭರಿಸಿದ ಕಾಳುಗಳು, ಹಾಗೂ ತಾಜಾ ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಇಫ್ಕೋ ಸಂಸ್ಥೆಯ ಅಧಿಕಾರಿಯಾದ ಶ್ರೀ ನವೀನ್ ಪಾಟೀಲ್, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾ ಅಧಿಕಾರಿಯಾದ ಶ್ರೀ ಚಂದ್ರಮೌಳಿ, ಉಪಾಧ್ಯಕ್ಷರಾದ ಶ್ರೀ ಕೆ. ಪಿ. ಜವರೇಗೌಡ ಮತ್ತು ಸಿಬ್ಬಂದಿಗಳು, ಕೆ.ವಿ.ಕೆ.ಶಿವಮೊಗ್ಗದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲ್ಲದೆ, 39 ಜನ ಅಂಗನವಾಡಿ ಕಾರ್ಯಕರ್ತೆಯರು, 21 ಮಹಿಳೆಯರು ಮತ್ತು ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊನೆಯದಾಗಿ ಮೆಂತೆ, ಕೊತ್ತಂಬರಿ, ಪಾಲಕ್ ಸೊಪ್ಪಿನ ಬೀಜಗಳು, ಕ್ಯಾರೆಟ್ ಮತ್ತು ಮೂಲಂಗಿ ತರಕಾರಿ ಬೀಜಗಳನ್ನು ಒಳಗೊಂಡ ‘ಸೀಡ್ ಕಿಟ್’ ಅನ್ನು ವಿತರಿಸಲಾಯಿತು.
