ಶಿವಮೊಗ್ಗ, ಜನವರಿ-09 : ಪೊಲಿಯೋ ಮುಕ್ತ ಪ್ರಪಂಚ ನಿರ್ಮಿಸುವ ದಿಶೆಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕಿದೆ ಎಂದು ರೋಟರಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಯೋಜನೆಯ ಉಪಾಧ್ಯಕ್ಷ ಡಾ. ಪಿ.ನಾರಾಯಣ್ ಕರೆ ನೀಡಿದರು.
ಅವರು ಬಾಪೂಜಿನಗರದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ “ಶಿವಮೊಗ್ಗ ತಾಲೂಕು ಚಾಲನಾ ಸಭೆ”ಯಲ್ಲಿ ವೈದ್ಯರು, ಕಾರ್ಯಕರ್ತರು ಹಾಗೂ ರೋಟರಿ ಕ್ಲಬ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಪಲ್ಸ್ ಪೊಲಿಯೋ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದು 25 ವರ್ಷಗಳಾಗಿದ್ದು, 9 ವರ್ಷಗಳಿಂದ ಭಾರತ ದೇಶದಲ್ಲಿ ಈ ರೋಗಾಣು ಪತ್ತೆಯಾಗಿರುವುದಿಲ್ಲ. ಆದರೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಇಂದಿಗೂ ಈ ರೋಗಾಣು ಜೀವಂತ ಆಗಿರುವುದರಿಂದ ಭಾರತ ಕೂಡ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದರು.
ಈ ನಿಟ್ಟಿಯಲ್ಲಿ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿ-ಸ್ವಯಂ ಸೇವಕರು ಪಲ್ಸ್ ಪೊಲಿಯೋ ಕುರಿತು ಜಾಗೃತಿ ಮೂಡಿಸಬೇಕಿದೆ. ಇದೇ ಜನವರಿಯಲ್ಲಿ ಅಂದೋಲನ ರೂಪದಲ್ಲಿ ಮನೆ ಮನೆಗೂ ಪಲ್ಸ್ ಪೊಲಿಯೋ ಬಗ್ಗೆ ತಿಳಿಸಬೇಕು ಎಂದರು.
ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್ ಮಾತನಾಡಿ, ರೋಟರಿ ಸಂಸ್ಥೆಯು ಪಲ್ಸ್ ಪೊಲಿಯೋ ಅಂದೋಲನ ಯಶಸ್ವಿಯಾಗಿಸುವ ದಿಶೆಯಲ್ಲಿ ನಿರಂತರ ಶ್ರಮಿಸುತ್ತಿದೆ. ಪಲ್ಸ್ ಪೊಲಿಯೋ ಅಂದೋಲನ ಜಾಗೃತಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ರೋಟರಿ ವಲಯ 11ರ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್ ಮಾತನಾಡಿ, ಜ. 29ರಿಂದ ಮೂರು ದಿನಗಳು ಜಿಲ್ಲಾದ್ಯಂತ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ನಡೆಯುತ್ತಿದೆ. ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆರೋಗ್ಯ ಇಲಾಖೆಯ ಈ ಕಾರ್ಯಕ್ರಮದ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ರಾಜೀವ್, ಪ್ರತಿಮಾ ಡಾಕಪ್ಪಗೌಡ, ಚಂದ್ರಪ್ಪ, ಪರಮೇಶ್ವರ್, ಡಾ. ದಿನೇಶ್, ಡಾ. ನಾಗರಾಜನಾಯ್ಕ, ಕೆ.ಪಿ.ಶೆಟ್ಟಿ, ಉಮಾ, ಡಾ. ಪರಮೇಶ್ವರ್ ಶಿಗ್ಗಾವ್, ಡಾ. ಗೌತಮ್ ಮತ್ತಿತರರು ಉಪಸ್ಥಿತರಿದ್ದರು.