News Next

ಶಿವಮೊಗ್ಗ, ಜುಲೈ 29: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ ಪುಸ್ತಕ ಬಹುಮಾನ ಯೋಜನೆಯಡಿ 2020ನೇ ಸಾಲಿನ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.
ವಿವಿಧ ಪ್ರಕಾರದ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದ್ದು, ಕಾವ್ಯ, ನವ ಕವಿಗಳ ಪ್ರಥಮ ಕವನ ಸಂಕಲನಗಳು, ಸಣ್ಣ ಕಥೆಗಳು, ನಾಟಕ, ಪ್ರವಾಸ ಸಾಹಿತ್ಯ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ‘ಜಾನಪದ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು’ ಮುಂತಾದ ಮಾನವಿಕ ಕೃತಿಗಳು, ಸಂಶೋಧನೆ, ಕನ್ನಡದಿಂದ ಅನ್ಯ ಭಾಷೆಗಳಿಗೆ ಅನುವಾದಗೊಂಡ ಕೃತಿಗಳು, ಚಿ. ಶ್ರೀನಿವಾಸರಾಜು ದತ್ತುನಿಧಿ ಬಹುಮಾನಕ್ಕಾಗಿ 30 ವರ್ಷ ಒಳಗಿನ ಯುವ ಕವಿಗಳ ಅಪ್ರಕಟಿತ ಕವನ ಸಂಕಲನಗಳು, ಚದುರಂಗ ದತ್ತಿನಿಧಿ ಬಹುಮಾನಕ್ಕಾಗಿ ಕಾದಂಬರಿಗಳು, ಬಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನಕ್ಕಾಗಿ ಲಲಿತ ಪ್ರಬಂಧ, ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನಕ್ಕಾಗಿ ಜೀವನ ಚರಿತ್ರೆ/ಆತ್ಮಕಥೆ, ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನಕ್ಕಾಗಿ ಸಾಹಿತ್ಯ ವಿಮರ್ಶೆ, ಬಿ. ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನಕ್ಕಾಗಿ ವೈಚಾರಿಕ/ಅಂಕಣ ಬರಹ, ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನಕ್ಕಾಗಿ ಇಂಗ್ಲೀಷ್ ಸೇರಿದಂತೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳು, ಮಧುರಚೆನ್ನ ದತ್ತಿನಿಧಿ ಬಹುಮಾನಕ್ಕಾಗಿ ಲೇಖಕರ ಮೊದಲ ಸ್ವತಂತ್ರ ಕೃತಿ, ಅಮೇರಿಕನ್ನಡ ದತ್ತಿನಿಧಿ ಬಹುಮಾನಕ್ಕಾಗಿ ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಗೊಂಡ ಕೃತಿಗಳು, ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನಕ್ಕಾಗಿ ದಾಸಸಾಹಿತ್ಯಗಳು ಹಾಗೂ ಸಂಕೀರ್ಣ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.
ಬಹುಮಾನಕ್ಕಾಗಿ ಸಲ್ಲಿಸುವ ಕೃತಿಗಳು ಮರುಮುದ್ರಣಗೊಂಡಿರುವ ಅಥವಾ ಪಿಎಚ್‍ಡಿ ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳಾಗಿರಬಾರದು. ಈ ಕೃತಿಗಳು ಪಠ್ಯಪುಸ್ತಕಗಳು ಅಥವಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತ ಸಾಹಿತ್ಯ ಕೃತಿಗಳಾಗಿರಬಾರದು. ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳಾಗಿರಬಾರದು. ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ ಮೂರು ವರ್ಷದವರೆಗೆ ಪರಿಗಣಿಸಲಾಗುವುದಿಲ್ಲ. ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2020ರ ಜನವರಿ ಒಂದರಿಂದ 2020ರ ಡಿಸೆಂಬರ್ 31ರ ಒಳಗೆ ಪ್ರಥಮ ಆವೃತ್ತಿಗಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಪ್ರಥಮ ಮುದ್ರಣ 2020 ಎಂದು ಕೃತಿಯಲ್ಲಿ ಮುದ್ರಿತವಾಗಿರಬೇಕು.
2020ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ 2021 ರ ಸೆಪ್ಟೆಂಬರ್ 15 ರೊಳಗೆ ತಲುಪಿಸಬಹುದಾಗಿದೆ. ಕಳುಹಿಸಲ್ಪಡುವ ಕೃತಿಯು, ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆಯ ಪುಟದಲ್ಲಿ ನಮೂದಿಸಿರಬೇಕು. ಪ್ರತಿ ಪ್ರಕಾರಗಳಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

error: Content is protected !!