ಶಿವಮೊಗ್ಗ, ಜನವರಿ 29 : ಶಿವಮೊಗ್ಗ ಮಹಾನಗರಪಾಲಿಕೆಯ ಮೇಯರ್ ಆಗಿ ಶ್ರೀಮತಿ ಸುವರ್ಣಾಶಂಕರ್ ಮತ್ತು ಉಪಮೇಯರ್ ಆಗಿ ಶ್ರೀಮತಿ ಸುರೇಖಾ ಮುರಳೀಧರ್ ಅವರು ತಲಾ 26 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ಡಾ|| ಎನ್.ವಿ.ಪ್ರಸಾದ್ ಅವರು ಘೋಷಿಸಿದರು.
ಅವರು ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪಾಲಿಕೆಯ ಮೇಯರ್, ಉಪಮೇಯರ್, ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯ ಚುನಾವಣಾಧಿಕಾರಿಗಳಾಗಿ ಭಾಗವಹಿಸಿ, ಹಲವು ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸಿದರು.
ಈ ಹಿಂದೆ ಮೇಯರ್ ಆಗಿದ್ದ ಶ್ರೀಮತಿ ಲತಾಗಣೇಶ್ ಮತ್ತು ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ರಿಕ್ತಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಪ್ರಸ್ತುತ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಮಹಿಳೆ ‘ಬಿ’ ಹಾಗೂ ಉಪಮೇಯರ್ ಸ್ಥಾನಕ್ಕೆ ಮಹಿಳಾ ಸಾಮಾನ್ಯ ವರ್ಗಗಳಿಗೆ ಮೀಸಲಿರಿಸಿ ಘೋಷಣೆಯಾಗಿತ್ತು. ಚುನಾವಣೆಯಲ್ಲಿ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ಹೆಚ್ಚುವರಿ ಪ್ರಾದೇಶಿಕ ಅಧಿಕಾರಿ ಶ್ರೀಮತಿ ವಿದ್ಯಾಕುಮಾರಿ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಉಪಸ್ಥಿತರಿದ್ದರು.