ಶಿವಮೊಗ್ಗ, ಜುಲೈ. 20 ರೈತರು ಪಶುಸಂಗೋಪನೆಯಲ್ಲಿ ಇತ್ತೀಚಿಗೆ ಆಸಕ್ತಿ ವಹಿಸುತ್ತಿರುವುದು ಕೃಷಿ ಜೊತೆಗೆ ಲಾಭದಾಯಕವಾದ ಉಪ ಕಸುಬಾಗಿದೆ. ಇದರೊಂದಿಗೆ ನಮ್ಮ ದೇಶದ ದೇಸಿ ತಳಿಗಳ ಸಂರಕ್ಷಣೆಯ ಕಾರ್ಯ ಮತ್ತು ಸಾವಯುವ ಗೊಬ್ಬರದ ಉತ್ಪಾದನೆಯು ಹೆಚ್ಚಾಗಲಿದೆ ಎಂದು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧನ ನಿರ್ದೇಶಕ ಡಾ. ಶಿವಪ್ರಕಾಶ್ ಹೇಳಿದರು.
ಅವರು ಇತ್ತೀಚೆಗೆ ನಗರದ ಪಶುವೈದ್ಯಕೀಯ ಮಹಾವಿದ್ಯಾಲಯ ಜಾನುವಾರು ಸಾಕಾಣಿಕೆ ಸಂಕೀರ್ಣದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರಕ್ಕೆ ಬದಲಿಯಾಗಿ ಸಾವಯುವ ಗೊಬ್ಬರ ಬಳಕೆ ಮಾಡಬೇಕು. ಆಗ ರೈತರಲ್ಲಿ ದೇಶಿ ತಳಿಗಳ ಸಾಕುವ ಮನೋಭಾವ ಬೆಳೆದು ಇದರಿಂದ ತಳಿಗಳ ರಕ್ಷಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರ್ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಅತ್ಯವಶ್ಯಕವಾದ ಪ್ರೋಟೀನ್ ಮತ್ತು ಕ್ಯಾಲ್ಷಿಯಂನ ಪೂರೈಕೆಯಲ್ಲಿ ಹಾಲಿನ ಪಾತ್ರ ಮಹತ್ವದ್ದು. ಈ ಕಾರಣದಿಂದಲೇ ಸರ್ಕಾರ ಪ್ರಾಥಮಿಕ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲಿನ ವ್ಯವಸ್ಥೆ ಮಾಡುತ್ತಿದೆ. ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ಕೊಡುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಈ ತರಬೇತಿಯಲ್ಲಿ ವಿವಿಧ ತಳಿಗಳಿಗೆ ಒದಗಿಸಬೇಕಾದ ವಸತಿ, ಆಹಾರ, ಪಾಲನೆ, ಹಾಗೂ ರೋಗಗಳಿಂದ ರಕ್ಷಣೆ, ನಿರ್ವಹಣೆ ಪ್ರಥಮ ಚಿಕಿತ್ಸೆ, ಮೌಲ್ಯವರ್ಧನೆ, ವಿಷಬಾಧೆಗಳು ಮುಂತಾದ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿ ನೀಡಲಾಯಿತು.
ವಿವಿಧ ಜಿಲ್ಲೆಗಳ ಸುಮಾರು 45 ಜನ ತರಬೇತಿಯಲ್ಲಿ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಸ್ವರ್ಣಧಾರ, ಕುರಿಗಳಲ್ಲಿ ರೋಗ ನಿಯಂತ್ರಣ, ಹಾಲಿನ ಗುಣಮಟ್ಟ, ಜೀವ ವೈವಿಧ್ಯತೆ ಮುಂತಾದ ವಿಷಯಗಳ ಕುರಿತಾದ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.

error: Content is protected !!