ಕೊವಿಡ್-19 ಬಿಕ್ಕಟ್ಟಿನ ದೃಷ್ಥಿಯಿಂದ, ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ಕೊರೊನಾ ಸೊಂಕು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲು “ಇ-ತರಬೇತಿ”ಕಾರ್ಯಕ್ರಮವನ್ನು ಬುಧವಾರ, ಎಪ್ರಿಲ್ 22, 2020 ರಂದು ಹಮ್ಮಿಕೊಳ್ಳಾಗಿತ್ತು. ಬಹು ಸಂಖೈಯಲ್ಲಿ ಎನ್. ಎಸ್. ಎಸ್. ಸ್ವಯಂ ಸೇವಕರು, ಇ-ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಇ-ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ರವರಾದ ಪ್ರೊಫೆಸರ್(ಡಾ.) ಪ್ರಕಾಶ್ ನಡೂರ್ರವರು ಈಗಿನ ಕೊವಿಡ್-19 ಬಿಕ್ಕಟ್ಟಿನ ಪರಿಸ್ಥಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವದರ ಜೊತೆಗೆ ಕೊರೊನಾ ಸೊಂಕು ತಡೆಗಟ್ಟುವ ಕುರಿತು ಸಾಮಾಜಿಕ ಅರಿವು ಮೂಡಿಸಲು ಇಂತಹ ಆನ್ಲೈನ್-ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತವಾಗಿವೆಂದು ತಿಳಿಸಿದರು. ಕೊರೊನಾ ಸೊಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ವೈಜ್ಞಾನಿಕ ಮಾಹಿತಿ ಕೊರೆತೆಯಿದೆ. ಈ ತರಬೇತಿಯಿಂದ ಜನರಿಗೆ ಅಗತ್ಯವಾದ ತಿಳುವಳಿಕೆ ನಮ್ಮ ಸ್ವಯಂಸೇವಕರಿಂದ ರವಾನೆಯಾಗಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ರಾಜ್ಯ ಎನ್. ಎಸ್. ಎಸ್. ಕೋಶದ ಅನುಷ್ಟಾನಾಧಿಕಾರಿಯಾದ ಡಾ: ಪೂರ್ಣಿಮಾ ಜೋಗಿ ರವರು ಕೊರೊನಾ ಸೊಂಕು ತಡೆಗಟ್ಟುವ ಕುರಿತಾದ ‘ಆನ್ಲೈನ್-ಮೊಬಿಸೋಡ್’ ಗಳನ್ನು ಬಿಡುಗಡೆ ಮಾಡಿದರು. ಇ-ತರಬೇತಿ ಹೊಂದಿದ ಎನ್. ಎಸ್. ಎಸ್. ಸ್ವಯಂ ಸೇವಕರು, ಬಹು ಸಂಖೈಯಲ್ಲಿ ಕೊವಿಡ್-19 ಮುನ್ನೆಚ್ಚರಿಕಾ ಸಲಹೆಗಳ ಬಗ್ಗೆ ತಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೆ ತಿಳಿಸಬೇಕೆಂದು ಕರೆಕೊಟ್ಟರು.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಎನ್. ಎಸ್. ಎಸ್. ಸಂಯೋಜನಾಧಿಕಾರಿ, ಡಾ: ಶ್ರೀಕಾಂತ ಕುಲಕರ್ಣಿ, ಸ್ವಯಂಸೇವಕರು ತಮ್ಮ ಜಿಲ್ಲಾಡಳಿತದ ಸಹಕಾರದೊಂದಿಗೆ ಸ್ವಯಂ ಮುನ್ನೆಚ್ಚರಕೆ ಕ್ರಮಗಳನ್ನು ಪಾಲಿಸುವುದರ ಮೂಲಕ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಇ-ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ: ಸುಂದರೇಶನ್, ಎಸ್. ಸಹಾಯಕ ಪ್ರಾಧ್ಯಾಪಕರು, ss ಸೂಕ್ಷಾಣುಜೀವಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಕೊವಿಡ್-19 ಬಗ್ಗೆ ಸಂಪೂರ್ಣವಾದ ತಾಂತ್ರಿಕ ಮಾಹಿತಿಯನ್ನು ನೀಡಿದರು. ಹಾಗೆಯೇ ಸಾಕು ಪ್ರಾಣಿಗಳ ಹಾಗೂ ಪಶುಪಾಲಕರುಗಳ ಜೀವ ಹಾಗೂ ಜೀವನವನ್ನು ಸಧೃಡವಾಗಿಸುವುದು ಮತ್ತು ಈ ಸಾಂಕ್ರಾಮಿಕ ರೋಗದ ವಿರುದ್ಧ ಸಾಮೂಹಿಕವಾಗಿ ಹೋರಾಡುವುದು ಸಂಬಂಧಪಟ್ಟ ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿದೆಂದು ತಿಳಿಸಿದರು.
ಜಾಗೃತಾ ಕಾರ್ಯಕ್ರಮವನ್ನು ಆಯೋಜಿಸಿದ, ರಾಷ್ಟ್ರೀಯ ಸೇವಾಯೋಜನಾ ಅಧಿಕಾರಿಗಳಾದ ಡಾ. ಎಮ್. ಧೂಳಪ್ಪ ಇವರು ತರಬೇತಿಯಲ್ಲಿ ಭಾಗವಹಿಸಿದವರನ್ನು ಸ್ವಾಗತಿಸಿದರು ಹಾಗೂ ಡಾ. ಎಮ್.ಎಮ್. ವೆಂಕಟೇಶ್ರವರು ವಂದಿಸಿದರು.