ಶಿವಮೊಗ್ಗ: ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ನಿರಂತರ ಪರಿಶ್ರಮ, ಛಲ ಹಾಗೂ ಆತ್ಮವಿಶ್ವಾಸವು ಅತ್ಯಂತ ಮುಖ್ಯ ಎಂದು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜಿ.ಎಚ್.ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರದ ಶ್ರಿ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್, ದೇವಸ್ಥಾನದ ಸಮಿತಿ, ಅರ್ಚಕ ವೃಂದದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 42 ಜನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ 7 ಜನ ವಿದ್ಯಾರ್ಥಿಗಳಿಗೆ ವಿವೇಕಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಜತೆಯಲ್ಲಿ ಸಮಾಜದ ಪ್ರಗತಿಯಲ್ಲಿ ಭಾಗಿಯಾಗಬೇಕು. ಉನ್ನತ ಸ್ಥಾನ ಅಲಂಕರಿಸಿದ ಸಂದರ್ಭಗಳಲ್ಲಿ ಸೇವಾ ಕಾರ್ಯಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಣಮ್ಯ ಆರ್., ಪೂರ್ವಿ ಎಲ್ ರಾಜ್, ರೋಹಿಣಿ ಬಿ, ಹರ್ಷಿತ ಟಿ.ಎಂ., ಶರಣ್ಯ ವಿ ಶೆಟ್ಟಿ, ತರುಣ್ ಎ.ಎನ್. ಹಾಗೂ ಜಾಹ್ನವಿ ಎಲ್ ನಾಯ್ಕ ಅವರಿಗೆ ಪ್ರತಿಭಾ ಪುರಸ್ಕಾರದ ಜತೆಯಲ್ಲಿ ನಗದು ಬಹುಮಾನ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಮುಖರಾದ ರಾಮಲಿಂಗಪ್ಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅವಕಾಶಗಳಿವೆ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಆಸಕ್ತಿ ವಹಿಸುವ ಜತೆಯಲ್ಲಿ ಇಷ್ಟದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರಯತ್ನ ಆರಂಭಿಸಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ಕುಮಾರ್, ಪದ್ಮಾವತಿ, ಸಂದೇಶ್ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.