ಶಿವಮೊಗ್ಗ, ಮಾರ್ಚ್ 05 : ರಾಜ್ಯ ಸರ್ಕಾರಿ ನೌಕರರ ಹಲವು ದಶಕಗಳ ಬೇಡಿಕೆಯಾಗಿದ್ದ ನಗದುರಹಿತ ಚಿಕಿತ್ಸೆಗೆ 50.00ಕೋಟಿ ರೂ.ಗಳ ಅನುದಾನ ಮೀಸಲಿಡುವ ಮೂಲಕ ರಾಜ್ಯ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಅವಲಂಬಿತರ ಕುರಿತು ವಿಶೇಷ ಕಾಳಜಿ ತೋರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಂತ್ರಿಮಂಡಲದ ಸಚಿವರಿಗೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಯೋಜನೆಯ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 22.5ಲಕ್ಷ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಅನುಕೂಲವಾಗಲಿದೆ. ಈ ಹಿಂದೆ ಅನಾರೋಗ್ಯಕ್ಕೆ ತುತ್ತಾದ ನೌಕರರು ಅಥವಾ ಅವರ ಕುಟುಂಬದ ಅವಲಂಬಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸಾವೆಚ್ಚ ಪಾವತಿಸಲು ಪರಿತಪಿಸುವಂತಾಗಿತ್ತು. ಈ ಹಿಂದೆ ಜಾರಿಯಲ್ಲಿದ್ದ ಜ್ಯೋತಿ ಸಂಜೀವಿನಿ ಯೋಜನೆಯನ್ನು ಮಾರ್ಪಡಿಸಿ, ಶಸ್ತ್ರಚಿಕಿತ್ಸಾ ವಿಧಾನಗಳಿಗೆ ನಗದುರಹಿತ ಚಿಕಿತ್ಸೆ ನೀಡಲು ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ನೌಕರರ ನೆಮ್ಮದಿಯ ಬದುಕಿಗೆ ಭದ್ರತೆ ದೊರೆತಂತಾಗಲಿದೆ ಎಂದವರು ತಿಳಿಸಿದ್ದಾರೆ.
ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಹಾಗೂ ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಕರ ಸೇವಾ-ಸೌಲಭ್ಯ ಇತರೆ ಮಾಹಿತಿಗಳನ್ನು ಅಂತರ್ಜಾಲ ವ್ಯವಸ್ಥೆ ಮೂಲಕ ತಲುಪಿಸಲು ‘ಶಿಕ್ಷಕರ ಮಿತ್ರ’ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಬಜೆಟ್ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ. ಈ ವ್ಯವಸ್ಥೆಯಿಂದಾಗಿ ರಾಜ್ಯದ ಲಕ್ಷಾಂತರ ಸಂಖ್ಯೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದವರು ತಿಳಿಸಿದ್ದಾರೆ.