ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ವಾರದಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಸಾರ್ವಜನಿಕರ ಜನ-ಜಾನುವಾರು, ಬೆಳೆ, ಮನೆ-ಮಠ, ಆಸ್ತಿಪಾಸ್ತಿ ನಷ್ಟದ ಕುರಿತು ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ, ನಷ್ಟದ ಅಂದಾಜು ಲೆಕ್ಕವನ್ನು ಕ್ರೋಡೀಕರಿಸಿ, ಅಗತ್ಯ ಪರಿಹಾರಧನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‍ಚಾವ್ಲಾ ಅವರು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ನೆರೆಹಾನಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಧಿಕಾರಿಗಳು ಸಂಕಷ್ಟಕ್ಕೊಳಗಾದ ಯಾವುದೇ ವ್ಯಕ್ತಿಯೂ ಈ ಸಮೀಕ್ಷೆಯಿಂದ ಹೊರಗುಳಿಯದಂತೆ ಹಾಗೂ ಮಾಹಿತಿ ನೀಡುವ ಅಧಿಕಾರಿಗಳು ವಿಷಯವನ್ನು ವೈಭವೀಕರಿಸದಂತೆ ವಾಸ್ತವ ಚಿತ್ರಣ ಮತ್ತು ಸರ್ಕಾರದಿಂದ ಬೇಕಾಗುವ ಪರಿಹಾರ ಮೊತ್ತದ ಕರಾರುವಾಕ್ಕಾದ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು.
ನೆರೆಯಿಂದ ಸಂತ್ರಸ್ಥರಾದ ಅನೇಕ ಕುಟುಂಬಗಳ ಅಸಂಖ್ಯಾತ ಸದಸ್ಯರು ನೆರೆ ಪರಿಹಾರ ಕೇಂದ್ರಗಳಲ್ಲಿ ವಸತಿ ಸೌಲಭ್ಯ ಪಡೆದುಕೊಂಡು ಈಗೀಗ ಮನೆಗೆ ತೆರಳುತ್ತಿದ್ದಾರೆ. ಆದರೂ ಶಿವಮೊಗ್ಗದ 4ಕೇಂದ್ರಗಳಲ್ಲಿ ಹಾಗೂ ಸಾಗರದ ಒಂದು ಕೇಂದ್ರದಲ್ಲಿ ಇನ್ನೂ ಸಂತ್ರಸ್ಥರು ಇದ್ದಾರೆ. ಇದಲ್ಲದೇ ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿಯೂ ನೆರೆ ಪರಿಹಾರ ಕೇಂದ್ರಕ್ಕೆ ಬರದಿರುವವರೂ ಇದ್ದಾರೆ. ಅವರೆಲ್ಲರೂ ದಿನಕ್ಕೆ ರೂ.60/-ರಂತೆ ನಿರ್ವಹಣಾ ವೆಚ್ಚ ಹಾಗೂ ರೂ.10,000/-ಗಳ ಪರಿಹಾರಧನ ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ ಅಂತಹ ಸಂತ್ರಸ್ಥರ ವಿಳಾಸ, ಬ್ಯಾಂಕ್ ಖಾತೆ ಮತ್ತಿತರ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಸಮೀಕ್ಷೆ ನಡೆಸಿ, ಸರಿಯಾದ ಮಾಹಿತಿ ಸಂಗ್ರಹಿಸಬೇಕು. ಸಂಪರ್ಕ ಕಡಿತಗೊಂಡ ರಸ್ತೆಗಳು ಸಂಚಾರ ಮುಕ್ತವಾಗುವಲ್ಲಿ, ಸಂತ್ರಸ್ಥರ ರಕ್ಷಣೆ ಮಾಡುವಲ್ಲಿ ಹಾಗೂ ಎನ್.ಡಿ.ಆರ್.ಎಫ್ ಗೆ ಖರ್ಚು ಮಾಡಿದ ಕುರಿತು ದಾಖಲೆ ಸಲ್ಲಿಸಿದವರಿಗೆ ಹಣ ಪಾವತಿಸಲು ಕ್ರಮವಹಿಸುವುದಾಗಿ ಅವರು ನುಡಿದರು.
ಸಣ್ಣ ಹಿಡುವಳಿದಾರರ ಸುಮಾರು 680ಹೆಕ್ಟೇರ್ ಮಳೆಆಶ್ರಿತ ಮತ್ತು 3027ಹೆಕ್ಟೇರ್ ನೀರಾವರಿ ಕೃಷಿಭೂಮಿ ಹಾಗೂ 1309ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಬಹುಮುಖ್ಯವಾಗಿ ಶುಂಠಿ ಮತ್ತು ಅನಾನಸ್ ಬೆಳೆ ಅಲ್ಲದೇ ಸುಮಾರು 3680ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಯನ್ನು ಗುರುತಿಸಲಾಗಿದೆ. ಅವುಗಳಲ್ಲಿ ಇದರೊಂದಿಗೆ ಜಾನುವಾರುಗಳು ಮೃತಪಟ್ಟಿರುವುದನ್ನು ಗುರುತಿಸಲಾಗಿದೆ. ಅವುಗಳ ನಷ್ಟದ ಒಟ್ಟು ಅಂದಾಜು ಮೊತ್ತವನ್ನು ಶೀಘ್ರದಲ್ಲಿ ಸಮೀಕರಿಸಿ ತಿಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ 482ಕಚ್ಚಾ ಮನೆಗಳು, 1203ಮನೆಗಳು ಗಂಭೀರ ಸ್ವರೂಪದಲ್ಲಿ ಹಾಗೂ 1399ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇವುಗಳಲ್ಲದೇ ಕೊಟ್ಟಿಗೆ ಮನೆಗಳು ಕೂಡ ಹಾನಿಗೊಳಗಾಗಿರುವುದನ್ನು ಗುರುತಿಸಲಾಗಿದೆ. ಅಂತೆಯೇ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಶಾಲೆಗಳು, ಆರೋಗ್ಯ ಕೇಂದ್ರಗಳು, ಅಂಗನವಾಡಿ ಕಟ್ಟಡಗಳು, ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಅವುಗಳ ನಷ್ಟವನ್ನು ಅಂದಾಜು ಮಾಡಲಾಗುವುದಲ್ಲದೇ ಅವುಗಳ ದುರಸ್ತಿ, ನವೀಕರಣ ಹಾಗೂ ನೂತನ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದವರು ನುಡಿದರು.
ಉಳಿದಂತೆ ನೀರಾವರಿ, ಕುಡಿಯುವ ನೀರಿನ ಸ್ಥಾವರಗಳು, ವಿದ್ಯುತ್ ಸಂಪರ್ಕ ಕಡಿತಗೊಂಡ ಗ್ರಾಮಗಳು ಅವುಗಳ ಪುನರ್ ಸೌಲಭ್ಯ ಕಲ್ಪಿಸುವ ಮುಂತಾದ ಅನೇಕ ವಿಷಯಗಳ ಕುರಿತು ಕಾರ್ಯದರ್ಶಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಗೂ ಮುನ್ನ ತೀರ್ಥಹಳ್ಳಿ ಮತ್ತು ಶಿವಮೊಗ್ಗ ತಾಲೂಕಿನ ನೆರೆಪೀಡೀತ ಹೆಗಲತ್ತಿ, ಬಠಾಣ ಜಡ್ಡು, ಸೈದೂರು ಸೇತುವೆ ಮುಂತಾದ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.