ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖಾ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಚರ್ಚಿಸಿ, ಅಗತ್ಯ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಪಂಚಾಯತ್‍ರಾಜ್ ಇಲಾಖೆಗೆ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಲಾಖೆಯಲ್ಲಿನ ಸಿಬ್ಬಂಧಿಗಳ ಕೊರತೆಯನ್ನು ನೀಗಿಸಲು ನಿವೃತ್ತ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದೆಂದವರು ನುಡಿದರು.
ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಜಿಲ್ಲೆಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಒಂದು ತಿಂಗಳ ಅವಧಿಯೊಳಗಾಗಿ ಬಿಡುಗಡೆಗೊಳಿಸಲಾಗುವುದೆಂದ ಅವರು, ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಲು ಉದ್ದೇಶಿಸಲಾಗಿರುವ 241ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಂದಿನ ಹದಿನೈದು ದಿನಗಳೊಳಗಾಗಿ ಪೂರ್ಣಗೊಳಿಸಿ ಮಾಹಿತಿ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಕ್ಷಮಿಸಲಾಗುವುದಿಲ್ಲ ಅಲ್ಲದೇ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮತ್ತು ಅಂಗನವಾಡಿ ಕಟ್ಟಡಗಳ ಸರ್ವಾಂಗೀಣ ವಿಕಾಸಕ್ಕಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಕೊಡುಗೈ ದಾನಿಗಳಿಂದ ಸಹಕಾರದೊಂದಿಗೆ ಅಭಿವೃದ್ದಿಪಡಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಅನೇಕ ಸಂಘ-ಸಂಸ್ಥೆಗಳು ಸಹಕಾರ ನೀಡುವುದಾಗಿ ಭರವಸೆ ನೀಡಿವೆ. ಶಿವಮೊಗ್ಗ ನಗರದಲ್ಲಿ ಈಗಾಗಲೇ ಸಭೆ ನಡೆಸಿ, ಕಟ್ಟಡಗಳ ದುರಸ್ತಿಯ ಅಂದಾಜುಪಟ್ಟಿ ತಯಾರಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಭೆಗಳನ್ನು ನಡೆಸಿ, ಕಟ್ಟಡ ದುರಸ್ತಿಗಾಗಿ ಯತ್ನಿಸಲಾಗುವುದೆಂದವರು ನುಡಿದರು.
ಜಿಲ್ಲೆಯಲ್ಲಿ ಮಳೆಹಾನಿಯಿಂದ ಒಡೆದುಹೋಗಿರುವ ಕೆರೆಕಟ್ಟೆ ಕಾಲುವೆಗಳ ದುರಸ್ತಿಗೊಳಿಸಿ, ನೀರನ್ನು ಸಂಗ್ರಹಿಸುವ ತುರ್ತು ಅಗತ್ಯವಿದೆ. ಇದು ಮುಂದೆ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ. ಆದ್ದರಿಂದ ಅವುಗಳ ದುರಸ್ತಿಗೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ಶಾಸಕ ಕೆ.ಬಿ.ಅಶೋಕನಾಯ್ಕ್ ಅವರ ಕೋರಿಕೆಗೆ ಸಚಿವರು ಅಗತ್ಯ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕಡಿಮೆ ಮೊತ್ತದ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಿ, ನಂತರ ಹೆಚ್ಚಿನ ಮೊತ್ತವನ್ನು ನಿರೀಕ್ಷಿಸುವ ಕಾಮಗಾರಿಗಳನ್ನು ನಂತರದ ಹಂತಕ್ಕೆ ಬೇಡಿಕೆ ಪಟ್ಟಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ನೆರವಿನಿಂದ 2012ರಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕೋಟ್ಯಾಂತರ ರೂ.ಗಳ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಅನೇಕ ಕಟ್ಟಡಗಳು ಪೂರ್ಣಗೊಳ್ಳದೇ ಹಾಗೆ ಉಳಿದಿವೆ. ಇನ್ನೂ ಕೆಲವು ಕಟ್ಟಡಗಳ ಕಾಮಗಾರಿಗಳೇ ಆರಂಭಗೊಂಡಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಸಚಿವರ ಗಮನಕ್ಕೆ ತಂದರು. ಅದಕ್ಕೆ ಸಚಿವರು ಈ ಸಂಬಂಧ ಗುತ್ತಿಗೆದಾರರು ಹಾಗೂ ಇಲಾಖೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ತ್ವರಿತವಾಗಿ ಕಟ್ಟಡ ನಿರ್ಮಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿಕೊಡಲು ಸೂಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 4836ಮನೆಗಳ ನಿರ್ಮಾಣಕ್ಕೆ ರಾಜೀವಗಾಂಧಿ ವಸತಿ ಯೋಜನೆಯಡಿ ಮಂಜೂರಾತಿ ದೊರೆತಿದ್ದು, ಅದಕ್ಕೆ ಪೂರಕವಾಗಿ ಫಲಾನುಭವಿಗಳು ಇಲ್ಲದಿರುವುದರಿಂದ ಸದ್ಯ ಅರ್ಜಿ ಸಲ್ಲಿಸಿರುವ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ತಿಳಿಸಿದರು. ಆಗ ಸಚಿವರು ಉಳಿದ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸುವಂತೆ ಆಯುಕ್ತರಿಗೆ ಸೂಚಿಸಿದರು. ಉಳಿದಂತೆ ಸಿದ್ಲೀಪುರದಲ್ಲಿ ಕೈಗಾರಿಕಾ ಕಾರ್ಮಿಕರಿಗಾಗಿ ಕಾಯ್ದಿರಿಸಲಾಗಿರುವ ಜಾಗದಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್, ಮಹಾನಗರಪಾಲಿಕೆ ಮಹಾಪೌರರಾದ ಶ್ರೀಮತಿ ಲತಾಗಣೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಸಕರು ಉಪಸ್ಥಿತರಿದ್ದರು.

error: Content is protected !!