ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮಹಾನಗರಗಳಲ್ಲಿ ನಿರ್ವಹಿಸುತ್ತಿದ್ದ ಉದ್ಯೋಗವನ್ನು ತೊರೆದು ತವರಿಗೆ ಹಿಂದಿರುಗಿರುವ ವಿದ್ಯಾವಂತ ನಿರುದ್ಯೋಗಿ ಯುವಕರು ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿಕೊಳ್ಳಲು ಅನುಕೂಲವಾಗುವಂತೆ ಬ್ಯಾಂಕುಗಳಿಂದ ನೀಡಬಹುದಾದ ಸಾಲ-ಸೌಲಭ್ಯ ನೀಡಿ, ಉದ್ಯೋಗಿಗಳನ್ನಾಗಿ ರೂಪಿಸಲು ಇರಬಹುದಾದ ಸಾಧ್ಯತೆಗಳ ಕಡೆಗೆ ಗಮನಹರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಬ್ಯಾಂಕಿನ ಶಾಖಾ ಪ್ರಬಂಧಕರುಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ರೂಪಿಸಿ ಅನುಷ್ಠಾನಗೊಳಿಸಲಾಗಿರುವ ಕೇಂದ್ರ ಪುರಸ್ಕøತ ಮುದ್ರಾ ಯೋಜನೆ ನಿರೀಕ್ಷೆಯ ಗುರಿ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ. ನೆರೆಯ ಜಿಲ್ಲೆಗಳ ಪ್ರಗತಿಯನ್ನು ಗಮನಿಸಿದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಪ್ರಬಂಧಕರು ಈ ಯೋಜನೆಯ ಅನುಷ್ಠಾನಕ್ಕಾಗಿ ಶ್ರಮಿಸುವಂತೆ ಹಾಗೂ ಕೃಷಿ ಮತ್ತು ಕೈಗಾರಿಕಾ ವಲಯಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಅವರು ಸೂಚಿಸಿದರು.
ಅಲ್ಲದೇ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನಾ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ಕೂಡ ನಿರೀಕ್ಷೆಯ ಪ್ರಗತಿ ಸಾಧಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ವಾರದೊಳಗಾಗಿ ಈ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳು, ಪಡೆದ ಸೌಲಭ್ಯದ ವಿವರಗಳನ್ನು ನೀಡುವಂತೆ ಸೂಚಿಸಿದ ಅವರು, ಜನ್‍ಧನ್ ಯೋಜನೆಯಡಿ ಈವರೆಗೆ ಆಧಾರ್ ಮತ್ತು ಮೊಬೈಲ್ ಜೋಡಣೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿಲ್ಲದಿರುವ ಕಾರಣ ಫಲಾನುಭವಿಗಳು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ಹಿನ್ನೆಡೆಗೆ ಕಾರಣವಾಗಿದೆ. ಮುದ್ರಾ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 553ಲಕ್ಷ ರೂ.ಗಳ ಸಾಲ ನೀಡಿರುವುದು ಅತ್ಯಂತ ಕಡಿಮೆಯಾಗಿದೆ. ಈ ಬೆಳವಣಿಗೆ ತೃಪ್ತಿಕರವಾಗಿಲ್ಲ ಎಂದರು.
ಕೋವಿಡ್‍ನಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿಯವರು ವಾಣಿಜ್ಯ ವ್ಯವಹಾರಗಳಿಗೆ ಅನುಕೂಲವಾಗುವಂತೆ ಎಂ.ಎಸ್.ಎಂ.ಇ.ಗೆ ಅನೇಕ ಯೋಜನೆಗಳನ್ನು ರೂಪಿಸಿ, ಅಗತ್ಯ ಅನುದಾನ ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸಲು ಸೂಚಿಸಿದೆ. ಈ ಎಲ್ಲಾ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಅಗತ್ಯವಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಬ್ಯಾಂಕುಗಳಲ್ಲಿ ನೆರೆಯ ರಾಜ್ಯಗಳಿಂದ ಬಂದು ಕಾರ್ಯನಿರ್ವಹಿಸುತ್ತಿರುವವರು ಸ್ಥಳೀಯ ಭಾಷೆಯನ್ನು ಬಲ್ಲಿದರಿಂದ ಅರಿತು ಸ್ಥಳೀಯ ಜನರ ನೆರವಿಗೆ ಧಾವಿಸುವಂತೆ ಸೂಚಿಸಿದರು.
ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ನೀಡಬಹುದಾದ ಸಾಲ ಹಾಗೂ ಮತ್ತಿತರ ಸೌಲಭ್ಯವನ್ನು ಅಕ್ಟೋಬರ್ ಮಾಸಾಂತ್ಯದೊಳಗಾಗಿ ನೀಡಿ, ಶೇ.100ರಷ್ಟು ಗುರಿ ಸಾಧನೆಗೆ ಶ್ರಮಿಸಿ, ಜಿಲ್ಲೆಯನ್ನು ಅಗ್ರಪಂಕ್ತಿಯಲ್ಲಿರುವಂತೆ ನೋಡಿಕೊಳ್ಳಬೇಕೆಂದ ಅವರು, ಸರ್ಕಾರದ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳನ್ನು ತಲುಪಿಸುವಲ್ಲಿ ಬ್ಯಾಂಕುಗಳ ಶಾಖಾ ಪ್ರಬಂಧಕರು ಗಮನಹರಿಸಬೇಕೆಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಎಲ್ಲಾ ಬ್ಯಾಂಕುಗಳ ಸಕಾಲಿಕ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಅನುಕೂಲವಾಗುವಂತೆ ಗೂಗಲ್ ಸ್ಪ್ರೆಡ್‍ಶೀಟ್ ಖಾತೆ ತೆರೆದು, ಬ್ಯಾಂಕುಗಳ ವ್ಯವಹಾರವನ್ನು ಸಕಾಲಿಕವಾಗಿ ದಾಖಲಿಸುವಂತೆ ಲೀಡ್‍ಬ್ಯಾಂಕ್‍ನ ವ್ಯವಸ್ಥಾಪಕರಿಗೆ ಸೂಚಿಸಿದರು. ಇದರಿಂದಾಗಿ ವಹಿವಾಟಿನ ಸಮಗ್ರ ಮಾಹಿತಿ ದೊರೆಯಲಿದೆ ಎಂದ ಅವರು, ಸಾಲ ಮಂಜೂರಾದ ನಂತರವೂ ಸಾಲ ಪಡೆಯದಿರುವ ಫಲಾನುಭವಿಗಳಿಂದ ಲಿಖಿತವಾಗಿ ಪತ್ರ ಬರೆಸಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಲೀಡ್‍ಬ್ಯಾಂಕ್‍ನ ವ್ಯವಸ್ಥಾಪಕರ ಸುಧಾಕರ್, ನಬಾರ್ಡ್ ಪ್ರಬಂಧಕ ಡಿ.ರವಿ, ಕನ್ವೀನಿಯರ್ ದಯಾನಂದ್ ಸೇರಿದಂತೆ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!