ಶಿವಮೊಗ್ಗ, ಡಿಸೆಂಬರ್ 30 : ನಾಡಿನ ಸಮಸ್ತ ಜೀವಸಂಕುಲಗಳ ರಕ್ಷಣೆ, ಅವುಗಳ ಸಹನಶೀಲ ಬಳಕೆ ಕುರಿತು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ, ಹಂತಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಈಗಾಗಲೇ ರಾಜ್ಯದಾದ್ಯಂತ 1ಲಕ್ಷ ಎಕರೆ ಅರಣ್ಯ ಭೂಮಿ(ದೇವರಕಾಡು)ಯ ರಕ್ಷಣೆ ಮಾಡಲಾಗಿದ್ದು, ಅದರ ರಕ್ಷಣೆಗೆ ಅಗತ್ಯ ಅನುದಾನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದವರು ನುಡಿದರು.
ಜೀವವೈವಿಧ್ಯತೆಯ ಕುರಿತು ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ವಿಶೇಷವಾಗಿ ಔಷಧಿ ಮೂಲಿಕೆಗಳು ನಾಶವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳ ಕೇಳಿ ಬರುತ್ತಿವೆ. ಔಷಧ ಸಸ್ಯಗಳು ಇರುವ ಪ್ರಮಾಣ, ಅಳಿವಿನಂಚಿನಲ್ಲಿರುವ ಸಸ್ಯಗಳ ಬಗ್ಗೆ ಈ ಹಿಂದೆಯೇ ಸಮೀಕ್ಷೆ ನಡೆಸಲಾಗಿದೆ. ಅವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಜಿಲ್ಲೆಯ ವರದಾಮೂಲ, ವರದಹಳ್ಳಿಯ ನೈಸರ್ಗಿಕ ತಾಣಗಳು ಹಾಗೂ ತುಮರಿ-ಸಿಗಂಧೂರು ಸಮೀಪದಲ್ಲಿ ಔಷಧಿ ಸಸ್ಯಗಳ ತಾಣವನ್ನು ಸೃಜಿಸುವ ಉದ್ಧೇಶ ಹೊಂದಲಾಗಿದೆ. ಈ ಹಿಂದೆ ಜಿಲ್ಲೆಯ ಹುಂಚ ಸಮೀಪದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಗಣಿಗಾರಿಕೆಯನ್ನು ಸತತ ಹೋರಾಟಗಳ ಪರಿಶ್ರಮದಿಂದ ಸರ್ಕಾರವು ಗಣಿಗಾರಿಕೆಯ ಪಟ್ಟಿಯಿಂದ ಕೈಬಿಟ್ಟು ಆದೇಶ ಹೊರಡಿಸಿದೆ ಎಂದರು.
ಜಿಲ್ಲೆಯಲ್ಲಿ 110ಎಕರೆ ಕಾನು ಅರಣ್ಯ ರಚನೆಗೆ ನಿರ್ಧರಿಸಲಾಗಿದ್ದು, ಈ ಸಂಬಂಧ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಹಿಂದಿನಂತೆ ಗ್ರಾಮಗಳ ನೈಸರ್ಗಿಕ ಭೂಮಿ, ಸಂಪತ್ತಿನ ರಕ್ಷಣೆಗೆ ಪ್ರಯತ್ನ ಮುಂದುವರೆಯಲಿದೆ. ಹಳೆ ಸೊರಬದಲ್ಲಿ ಸುಮಾರು 300ಎಕರೆ ಭೂಮಿ ದೇವರಕಾಡೆಂದು ಘೋಷಿಸುವ ಕಾರ್ಯಕ್ಕೆ ಪುನರ್ಚಾಲನೆ ದೊರೆಯಲಿದೆ. ಪಶ್ಚಿಮ ಘಟ್ಟದಲ್ಲಿ ಆಗಾಗ್ಗೆ ಭೂಕುಸಿತ ಆಗುತ್ತಿದ್ದು, ಈ ಸಂಬಂಧ ಮುಂದಿನ 4-5ತಿಂಗಳಲ್ಲಿ ಸರ್ಕಾರಕ್ಕೆ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಲಾಗುವುದು ಎಂದರು.
ಕೃಷಿ ವೈವಿಧ್ಯ ಮತ್ತು ಬೀಜ ಸಂರಕ್ಷಣೆ ಮಸೂದೆ ರಚನೆ ಕುರಿತು ತಜ್ಞರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಅಭಿಪ್ರಾಯ ತಿಳಿಸಲಾಗುವುದು. ಭವಿಷ್ಯದಲ್ಲಿ ಮಂಡಳಿ ವತಿಯಿಂದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು, ಮೇ 22ರಂದು ಜಾಗತಿಕ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ರಾಜ್ಯದ ಪಾರಂಪರಿಕ ತಾಣ, ಪಾರಂಪರಿಕ ಸ್ಥಳ, ಪಾರಂಪರಿಕ ತಳಿ, ಪಾರಂಪರಿಕ ವೃಕ್ಷಗಳನ್ನು ಸಂರಕ್ಷಿಸುವ ಕುರಿತು ಹಾಗೂ ಪಾರಂಪರಿಕ ಜ್ಞಾನದ ಕುರಿತು ಸಂಗ್ರಹಣೆಗಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದ್ದು, ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ತಯಾರಿಸಲಾಗಿದೆ. ಜಿಲ್ಲೆಯ 07ತಾಲೂಕುಗಳಲ್ಲಿ ಮತ್ತು 271ಗ್ರಾಮ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ಸಮಿತಿಗಳನ್ನು ರಚಿಸಲಾಗಿದೆ. ಇದುವರೆಗೆ 171ಗ್ರಾಮ ಪಂಚಾಯಿತಿಗಳ ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ತಯಾರಿಸಿದ್ದು, ಉಳಿದ 100ಗ್ರಾಮ ಪಂಚಾಯಿತಿಗಳ ಜನತಾ ಜೀವವೈವಿಧ್ಯ ದಾಖಲಾತಿಗಳ ತಯಾರಿಕೆ ಕೆಲಸ ಪ್ರಗತಿಯಲ್ಲಿದೆ. ಅದಕ್ಕಾಗಿ ನಾಲ್ಕುಜನ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ನಗರ ಯೋಜನಾನಿದೇಶಕ ಡಾ|| ನಾಗೇಂದ್ರ ಎಫ್. ಹೊನ್ನಳ್ಳಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.