ಶಿವಮೊಗ್ಗ : ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ೩೫ನೇ ಘಟಿಕೋತ್ಸವದಲ್ಲಿ ದೀಕ್ಷಾ ನಾಯ್ಕ್ ಇವರು ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಸಮುದಾಯ ವಿಜ್ಞಾನ ವಿದ್ಯಾಲಯದ ಆಹಾರ ಮತ್ತು ಪೋಷಣೆ ವಿಭಾಗದ ಮುಖ್ಯ ಅಧ್ಯಾಪಕಿ ಡಾ. ಉಮಾ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಹ್ಯೂಮನ್ ಇಮ್ಯುನೋ ಡಿಫಿಷಿಯನ್ಸಿ (ಊIಗಿ) ಪಾಸಿಟಿವ್ ರೋಗಿಗಳಿಗೆ ಸಂಯೋಜಿತ ಮಿಶ್ರಣದ ಅಭಿವೃದ್ಧಿ” ಎಂಬ ಅತ್ಯುತ್ತಮ ಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಗೃಹ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜ್ಯೋತಿ ಎಂ ರಾಠೋಡ ರವರ ಪುತ್ರಿ.

ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕರ್ನಾಟಕದ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಹಾಗೂ ಕೃಷಿ ವಿಶ್ವ ವಿದ್ಯಾಲಯದಕುಲಪತಿ ಡಾ.ಎಂ.ಬಿ. ಚೆಟ್ಟಿ ರವರು ಘಟಿಕೋತ್ಸವ ಸಮಾರಂಭದಲ್ಲಿ ಪದವಿಯನ್ನು ಪ್ರಧಾನ ಮಾಡಿದರು.
ಡಾ. ದೀಕ್ಷಾ ನಾಯ್ಕ್ ಇವರು ಒಟ್ಟು ಏಳು ಸಂಶೋಧನಾ ಲೇಖನಗಳನ್ನು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ ನಾಲ್ಕು ಜನಪ್ರಿಯ ಲೇಖನಗಳು ಮತ್ತು ಮೂರು ಪುಸ್ತಕಗಳಲ್ಲಿ ಅಧ್ಯಾಯಗಳನ್ನು ಬರೆದಿರುತ್ತಾರೆ. ಅವರು ಪಡೆದಿರುವ ಪ್ರಶಸ್ತಿಗಳೆಂದರೆ ಐಸಿಎಆರ್- ಜೆಆರ್‌ಎಫ್, ಐಸಿಎಆರ್- ಎಸ್‌ಆರ್‌ಎಫ್, ಯುಜಿಸಿ ಎನ್‌ಇಟಿ- ಜೆಆರ್‌ಎಫ್ ಪ್ರಶಸ್ತಿ, ಮೂರು ಅತ್ಯತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ, ಅತ್ಯತ್ತಮ ಪಿಜಿ ಪ್ರಬಂಧ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಯುವ ಮಹಿಳಾ ವಿಜ್ಞಾನಿ ಪ್ರಶಸ್ತಿ, ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ, ಸಂಶೋಧನಾ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಟ್ಟು ೧೭ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ.
ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ “ಕರ್ನಾಟಕದ ಧಾರವಾಡ ಜಿಲ್ಲೆಯ ಗ್ರಾಮೀಣ ಜನಸಂಖ್ಯೆಯಲ್ಲಿ ಆಸ್ಟಿಯೋಪೊರೋಸಿಸ್ ಹರಡುವಿಕೆಯ” ಬಗ್ಗೆ ಲೇಖನ ಮಂಡಿಸಿ ಅತ್ಯುತ್ತಮ ಮೌಖಿಕ ಪ್ರಶಸ್ತಿಯನ್ನು ಪಡೆದಿರುತ್ತಾರೆ.ಅತೀ ಚಿಕ್ಕ ವಯಸ್ಸಿನಲ್ಲಿ ಅವರ ಸಾಧನೆಯು ಹೆಗ್ಗಳಿಕೆಗೆ ಪಾತ್ರವಾಗಿದ್ದು ಈ ಸಾಧನೆಗಳಿಗೆ ಮಾರ್ಗದರ್ಶಕರು, ಸ್ನೇಹಿತರು ಹಾಗೂ ಕುಟುಂಬದವರು ಅಭಿನಂದಿಸಿ ಶುಭ ಕೋರಿರುತ್ತಾರೆ.

error: Content is protected !!