ಶಿವಮೊಗ್ಗ, ನವೆಂಬರ್ 21 : ಕಂದಾಯ ಇಲಾಖೆ, ಚುನಾವಣಾ ಶಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದ ಫಲಾನುಭವಿಗಳ ಮಾಹಿತಿಯನ್ನು ಕ್ಲುಪ್ತ ಅವಧಿಯಲ್ಲಿ ಕಂಪ್ಯೂಟರ್ನಲ್ಲಿ ದಾಖಲಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಹಳೇ ಕಚೇರಿಯಲ್ಲಿ ಜಿಲ್ಲಾ ದಾಖಲೆಗಳ ನಿರ್ವಹಣಾ ಕೇಂದ್ರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕೇಂದ್ರದ ಆರಂಭದಿಂದಾಗಿ ಬೆಳೆ ಸಮೀಕ್ಷೆ, ನಗರ ಈಕ್ಷಣ, ಚುನಾವಣೆ ಸಂಬಂಧಿಸಿದ ವಿಷಯಗಳನ್ನಲ್ಲದೇ ಸರ್ಕಾರದ ಯಾವುದೇ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ದತ್ತಾಂಶಗಳನ್ನು ಈ ಕೇಂದ್ರದಲ್ಲಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷವೆಂದರೆ, ಕಂದಾಯ ಇಲಾಖೆಯಲ್ಲಿ ಹೆಚ್ಚುವರಿಯಾಗಿರುವ, ಅನುಪಯುಕ್ತ ಹಾಗೂ ಸುಸ್ಥಿತಿಯಲ್ಲಿದ್ದ ಕಂಪ್ಯೂಟರ್ಗಳನ್ನು ಬಳಸಿಕೊಂಡು ಕೇಂದ್ರ ಆರಂಭಿಸಲಾಗಿದೆ. ಇದಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಅಳವಡಿಸಲಾಗಿದೆ. ಈ ಕೇಂದ್ರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ ಎಂದರು.
ವಿಶೇಷವಾಗಿ ಕಂದಾಯ ಇಲಾಖೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ನೆಟ್ವರ್ಕ್ ಸಮಸ್ಯೆ, ಕಂಫ್ಯೂಟರ್ ಸಮಸ್ಯೆಯ ಕುರಿತು ಪರಿತಪಿಸದೇ ಈ ಕೇಂದ್ರದಲ್ಲಿ ತಮ್ಮೆಲ್ಲಾ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ ಎಂದರು.
ಇ-ಆಫೀಸ್ಗೆ ಚಾಲನೆ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಇಂದು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಾಗದರಹಿತ ಕಚೇರಿಯನ್ನಾಗಿ ಪರಿವರ್ತಿಸಿದ ಇ-ಆಫೀಸ್ ವ್ಯವಸ್ಥೆಗೆ ಚಾಲನೆ ನೀಡಿದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ಇ-ಆಫೀಸ್ ತಂತ್ರಾಂಶದಲ್ಲಿಯೇ ನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಕಡತಗಳನ್ನು ಕಚೇರಿಯಿಂದ ಕಚೇರಿಗೆ, ಟೇಬಲ್ನಿಂದ ಟೇಬಲ್ಗೆ ಹೊತ್ತೊಯ್ಯುವ ಅಗತ್ಯವಿಲ್ಲ. ಅಲ್ಲದೇ ಗ್ರಾಹಕರಿಗೆ ಕಡತ ವಿಲೇವಾರಿಯ ಕ್ಷಣಕ್ಷಣದ ಮಾಹಿತಿಯು ಮೊಬೈಲ್ ಸಂದೇಶದ ಮೂಲಕ ರವಾನೆಯಾಗಲಿದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮಿತವಾದ ಕಾಗದದ ಬಳಕೆಯಾಗಲಿದೆ ಎಂದರು.
ಅಲ್ಲದೇ ಇ-ಆಫೀಸ್ ವ್ಯವಸ್ಥೆ ಸೌಲಭ್ಯ ಹೊಂದಿರುವ ಕಚೇರಿಗಳೊಂದಿಗೂ ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತ ರವಾನೆ ಮಾಡಲಾಗುತ್ತದೆ. ಇಂದಿನ ಅತ್ಯಾಧುನಿಕ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಅನುಷ್ಠಾನಗೊಳಿಸಿರುವ ಈ ತಂತ್ರಾಂಶದಿಂದಾಗಿ ಗ್ರಾಹರಿಗೆ ತ್ವರಿತಗತಿಯ ಸೇವೆ ಲಭ್ಯವಾಗಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್, ತಹಶೀಲ್ದಾರರಾದ ಗಿರೀಶ್, ಚಂದ್ರಶೇಖರ್ ಸೇರಿದಂತೆ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.