ಶಿವಮೊಗ್ಗ, ಫೆಬ್ರವರಿ 06 : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ತಂಬಾಕು ಉತ್ಪನ್ನಗಳನ್ನು ಖರೀದಿಸುವಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಿಸುವುದನ್ನು ನಿಯಂತ್ರಿಸಿ, ಅಂತಹವರ ವಿರುದ್ಧ ತಂಬಾಕು ನಿಯಂತ್ರಣ ಕಾಯಿದೆಯಡಿ ದಂಡನೆಗೊಳಪಡಿಸಲು ಇಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ ಅವರು ಅಂಗಡಿ ಮುಂಗಟ್ಟು, ಹೋಟೆಲ್ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರಿಗೆ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪ್ರಾಪ್ತರಿಗೆ ಹಾಗೂ ಅಪ್ರಾಪ್ತರಿಂದ ತಂಬಾಕು ಉತ್ಪನ್ನಗಳ ಮಾರಾಟ, ಶಾಲಾ ಕಾಲೇಜುಗಳ 300 ಅಡಿ ಪ್ರದೇಶದ ಮಿತಿಯೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಕ್ಯಾನ್ಸರ್‍ನ ಕರಾಳತೆಯನ್ನು ಪ್ರತಿಬಿಂಬಿಸುವ ಚಿತ್ರವಿಲ್ಲದ ತಂಬಾಕು ಉತ್ಪನ್ನಗಳ ಪ್ಯಾಕೇಟ್‍ಗಳನ್ನು ಮಾರಾಟ ಮಾಡುವುದು ತಂಬಾಕು ನಿಯಂತ್ರಣ ಕಾಯಿದೆ–ಕೋಟ್ಪಾ 2003 ಕಾಯಿದೆಯ ಉಲ್ಲಂಘನೆಯಾಗಲಿದೆ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಮಾಹಿತಿ ನೀಡುತ್ತಿದ್ದರೂ, ಸೂಚನೆಯನ್ನು ನಿರ್ಲಕ್ಷಿಸಿ, ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ತಂಡ ಕಾಲಕಾಲಕ್ಕೆ ದಿಢೀರ್ ದಾಳಿ ನಡೆಸಿ, ದಂಡನೆಗೆ ಗುರಿಪಡಿಸಲಿದೆ ಎಂದವರು ನುಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಜಿಲ್ಲೆಯಾದ್ಯಂತ ಈಗಾಗಲೇ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ವರ್ತಕರದಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಸ್ಥಾನ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯಿದೆಯ ಸಮರ್ಪಕ ಅನುಷ್ಠಾನ ಮಾಡಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಮರ್ಪಕವಾಗಿ ಈ ಕಾಯಿದೆಯ ಅನುಷ್ಠಾನ ಮಾಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್, ಬಾರ್ & ರೆಸ್ಟೋರೆಂಟ್, ತಂಬಾಕು ಮಾರಾಟಗಾರರು, ಟೀ ಮಾರಾಟಗಾರರು ಕೋಟ್ಪಾ ಕಾಯಿದೆಯ ಉಲ್ಲಂಘಿಸದಂತೆ ಎಚ್ಚರಿಕೆಯಿಂದಿರಲು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ. ಶಂಕರಪ್ಪ ಅವರು ಮಾಹಿತಿ ನೀಡಿ, 2016ರಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿವಿಧ ತರಬೇತಿ ಕಾರ್ಯಾಗಾರಗಳು, ಐ.ಇ.ಸಿ. (ಆರಿವು ಚಟುವಟಿಕೆಗಳು), ಅನುಷ್ಠಾನ ಕಾರ್ಯಾಚರಣೆಗಳು, ಶಾಲಾ ತರಬೇತಿ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ. 2016 ರಿಂದ ಇಲ್ಲಿಯವರೆಗೆ ಸು.400 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ 10000 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ತಂಬಾಕು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಒಟ್ಟು 219 ಅನುಷ್ಠಾನ ಕಾರ್ಯಾಚರಣೆಗಳನ್ನು ನಡೆಸಿ, 5851 ಪ್ರಕರಣಗಳಲ್ಲಿ ರೂ. 3,26,667 ದಂಡ ವಸೂಲು ಮಾಡÀಲಾಗಿದೆ. ಪೊಲೀಸ್ ಇಲಾಖೆಯು ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ 35 ಪ್ರಕರಣಗಳನ್ನು ದಾಖಲಿಸಿರುವುದು ವಿಶೇಷ ಎಂದ ಅವರು ಜಿಲ್ಲೆಯ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಎಂದು ಘೋಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿ ಜಯನಗರ ಪೊಲೀಸ್‍ಠಾಣೆಯ ಸಬ್‍ಇನ್ಸ್ಪೆಕ್ಟರ್ ಬಸವರಾಜು, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್‍ರಾಜ್‍ಅರಸ್, ಸಮಾಜ ಕಾರ್ಯಕರ್ತ ರವಿರಾಜ್‍ಜಿ.ಕೆ., ಮಾಯಾಏಲಿಯಾಸ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!