ಶಿವಮೊಗ್ಗ. ಮೇ 31 : ಕಾರ್ಮಿಕ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸಹಯೋಗದೊಂದಿಗೆ ಜೂನ್ 12ರಂದು ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದೆಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಸೊಸೈಟಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಮೇಲ್ವಿಚಾರಣೆ ಮತ್ತು ಜಾಗರೂಕತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಅಲ್ಲದೇ ವಿಶ್ವವಿದ್ಯಾನಿಲಯಗಳಲ್ಲಿ ವಿಚಾರಸಂಕಿರಣಗಳನ್ನು ಏರ್ಪಡಿಸಲಾಗುವುದು. ಈ ಕಾರ್ಯಕ್ರಮಗಳು ಎಲ್ಲರಲ್ಲೂ ಅರಿವು ಮೂಡಿಸುವುದರ ಜೊತೆಗೆ ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದವರು ನುಡಿದರು.
ಬಾಲಕಾರ್ಮಿಕ ಪದ್ದತಿ ಕಾಯ್ದೆಯನ್ವಯ 14ವರ್ಷದೊಳಗಿನ ಮಕ್ಖಳು ಅಪಾಯಕಾರಿ ಉದ್ದಿಮೆ, ಕೈಗಾರಿಕೆ ಹಾಗೂ ಅಪಾಯಕಾರಿಯಲ್ಲದ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಅಂತಹ ಮಕ್ಕಳನ್ನು ಕೆಲಸದ ಸ್ಥಳದಿಂದ ಮುಕ್ತಿಗೊಳಿಸಿ ಅಥವಾ ಬಿಡುಗಡೆಗೊಳಿಸಿ ಬಾಲಕಾರ್ಮಿಕ ವಿಶೇಷ ಬಾಲಕಾರ್ಮಿಕ ವಿಶೇಷ ವಸತಿಶಾಲೆಯ ಮೂಲಕ ಸದರಿ ಮಕ್ಕಳಿಗೆ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದವರು ನುಡಿದರು.
ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ ಕಾಯ್ದೆಯನ್ವಯ ನಿಗಧಿಪಡಿಸಿದ 14ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿಯಲ್ಲದ ಕೆಲಸದಲ್ಲಿ ನೇಮಿಸುವುದು ಹಾಗೂ ಅಪಾಯಕಾರಿ ಉದ್ದಿಮೆ, ಕೈಗಾರಿಕೆಗಳಲ್ಲಿ 18ವರ್ಷದೊಳಗಿನ ಕಿಶೋರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಮಾರು 609ಬಾಲಕಾರ್ಮಿಕರ ತಪಾಸಣೆಗಳನ್ನು ನಡೆಸಲಾಗಿದೆ ಎಂದರು.
ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ವಲಯವನ್ನಾಗಿ ಮಾಡಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬಾಲಕಾರ್ಮಿಕ ಮುಕ್ತ ವಲಯವನ್ನಾಗಿ ಮಾಡುವ ಕುರಿತು ಸಮಾಲೋಚನೆ ಸಭೆ ಆಯೋಜಿಸಲಾಗಿರುತ್ತದೆ. ಸ್ವಸಹಾಯ ಸಂಘ, ಸ್ವಯಂಸೇವಕರು, ಶೈಕ್ಷಣಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಎಸ್.ಡಿ.ಎಂ.ಸಿ., ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಧಾರ್ಮಿಕ ಮುಖಂಡರು, ಮಕ್ಕಳ ಸಹಾಯವಾಣಿ ಮುಂತಾದವುಗಳಲ್ಲಿ ಬಾಲಕಾರ್ಮಿಕ ಮುಕ್ತ ವಲಯದ ¨ಗ್ಗೆ ಪರಿಕಲ್ಪನೆ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ ಪ್ರತಿ ವಾರ್ಡು, ಗ್ರಾಮ ಪಂಚಾಯಿತಿಗಳವಾರು ಸದಸ್ಯರು ಮತ್ತು ಸ್ಥಳೀಯ ಸಂಸ್ಥೆ, ಉದ್ದಿಮೆಗಳ ಮಾಲೀಕರುಗಳಿಂದ ಮುಚ್ಚಳಿಕೆ ಪತ್ರ ಪಡೆಯಲು ಉದ್ದೇಶಿಸಲಾಗಿದೆ. ಅಂತೆಯೇ ಹೋಟೆಲ್, ಕಿರಾಣಿ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಬಿತ್ತಿಪತ್ರ ಹಾಗೂ ಪೋಸ್ಟರ್ಗಳ ಮೂಲಕ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಬಾಲಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ವ್ಯವಸ್ಥಿತ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಬಂದಿದೆ. ಇದರಿಂದಾಗಿ ಗ್ಯಾರೇಜುಗಳಲ್ಲಿ ಈ ಹಿಂದೆ ಕಂಡು ಬರುತ್ತಿದ್ದ ಬಾಲಕಾರ್ಮಿಕರು ಪ್ರಸ್ತುತ ದಿನಗಳಲ್ಲಿ ಕಾಣಸಿಗುವುದಿಲ್ಲ ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಸರಸ್ವತಿ ಕೆ.ಎನ್., ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂಧಿಗಳು ಉಪಸ್ಥಿತರಿದ್ದರು.