ಶಿವಮೊಗ್ಗ : ಜೂನ್ 15: ಭಾರತೀಯ ವಾಯುಸೇನೆಯು ಜುಲೈ 17ರಿಂದ 22ರವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ವಾಯುಸೇನೆ ನೇಮಕಾತಿ ಏರ್ಪಡಿಸಿದ್ದು, ರಾಜ್ಯದ ಪುರುಷ ವಿದ್ಯಾರ್ಥಿಗಳು ಆಯಾ ಜಿಲ್ಲೆಗೆ ನಿಗಧಿಪಡಿಸಿದ ದಿನಾಂಕದಂದು ನೇಮಕಾತಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾಯುಸೇನೆ ನೇಮಕಾತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜುಲೈ 17 ಮತ್ತು 18ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಹಾಗೂ ಜುಲೈ 22 ಮತ್ತು 22ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ(ಮಂಗಳೂರು), ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಅಭ್ಯರ್ಥಿಗಳು ದೇಹದಾಢ್ರ್ಯ ಮತ್ತು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಜುಲೈ 19 ಮತ್ತು 20ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಈ ನೇಮಕಾರಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದರು.
ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಯು ದ್ವಿತೀಯ ಪಿ.ಯು.ಸಿ.ಯಲ್ಲಿ ಯಾವುದೇ ವಿಭಾಗದಲ್ಲಿ ಶೇ.50ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಆಂಗ್ಲಭಾಷೆಯಲ್ಲಿ ಕನಿಷ್ಟ 50ರಷ್ಟು ಅಂಕಗಳನ್ನು ಗಳಿಸಿರಬೇಕು. ನೇಮಕಾತಿಗೆ ನಿಗಧಿಪಡಿಸಿದ ಎತ್ತರ ಹಾಗೂ ತೂಕ ಹೊಂದಿರಬೇಕು. 1999ರ ಜುಲೈ ನಿಂದ 2003ರ ಜುಲೈ 01ರೊಳಗಾಗಿ ಜನಿಸಿದ ಅಭ್ಯರ್ಥಿಗಳಾಗಿರಬೇಕು. ಅಭ್ಯರ್ಥಿಯು ತನ್ನ ವಿದ್ಯಾರ್ಹತೆಯ ಮೂಲ ಹಾಗೂ ನಾಲ್ಕು ನಕಲು ಪ್ರತಿಗಳು ಹಾಗೂ 30ಭಾವಚಿತ್ರಗಳು, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ.30,000/-ಗಳ ವೇತನ ಹಾಗೂ ಭತ್ಯೆಗಳನ್ನು ನೀಡಲಾಗುವುದು. ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ, ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದ ನೆಹರೂ ಮೈದಾನದಲ್ಲಿಯೇ ನೇಮಕಾತಿ ರ್ಯಾಲಿ ನಡೆಯುತ್ತಿರುವುದರಿಂದ ರ್ಯಾಲಿಯಲ್ಲಿ ಭಾಗವಹಿಸಲಿಚ್ಚಿಸುವ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ತರಬೇತಿ ತರಗತಿಗಳನ್ನು ತೆಗೆದುಕೊಳ್ಳಲು ಸೂಕ್ತ ಏರ್ಪಾಡು ಮಾಡುವಂತೆ ನೇಮಕಾತಿ ರ್ಯಾಲಿಯ ನೋಡಲ್ ಅಧಿಕಾರಿ ಚಂದ್ರಪ್ಪ ಅವರಿಗೆ ಸೂಚಿಸಿದರು.
ಸಭೆಯಲ್ಲಿ ವಿಂಗ್ ಕಮಾಂಡರ್ ಮಯಾಂಕ್ ತಾನೂಂಗೊ, ಜೆ.ಡಬ್ಲ್ಯೂ.ಒ. ಜೆ.ಸಿ.ಮಿಶ್ರಾ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‍ಖಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ, ಯುವ ಸಬಲೀಕಣ ಮತ್ತು ಕ್ರೀಡಾಧಿಕಾರಿ ರಮೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಜೇಶ್ ಸುರಗೀಹಳ್ಳಿ, ತಾಲೂಕು ಶಿಕ್ಷಣಾಧಿಕಾರಿ ಶಂಕರಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!