ಶಿವಮೊಗ್ಗ, ಎ.15 : ಕಾನು ಅರಣ್ಯ ಖಾಸಗಿ ಪಾಲಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸೂಚನೆ ನೀಡಿದರು.
ಅವರು ಶನಿವಾರ ಸಾಗರ ತಾಲೂಕಿನ ಯಡೆಹಳ್ಳಿ ಗ್ರಾಮ ಪಂಚಾಯತ್‍ನಲ್ಲಿ ನಡೆದ ಗ್ರಾಮ ಪಂಚಾಯತ್ ಜೀವ ವೈವಿಧ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದರು.
ಆನಂದಪುರ ಸಮೀಪ ಗಂಟಿಕೊಪ್ಪ ಮತ್ತು ಅಡೂರು ಕಾನು ಅರಣ್ಯಗಳನ್ನು ಖಾಸಗಿ ಪಾಲಾಗುವುದರಿಂದ ತಪ್ಪಿಸಬೇಕು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಬಳಿಕ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗಂಟಿಕೊಪ್ಪ ಮತ್ತು ಅಡೂರು, ಹಿರುವಕ್ಕಿ ಕಾನು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. 150 ಎಕ್ರೆ ಪ್ರದೇಶದಲ್ಲಿ ಬಹು ಅಪರೂಪದ ಭಾರಿ ಗಾತ್ರದ 15ಸಾವಿರ ಮರಗಳು ಈ ಪ್ರದೇಶದಲ್ಲಿ ಇವೆ. ಇವು ಪಾರಂಪರಿಕ ವೃಕ್ಷಗಳಾಗಿದ್ದು, ಇವುಗಳನ್ನು ಪಾರಂಪರಿಕ ಜೈವಿಕ ಕಾನು ಎಂದು ಗುರುತಿಸಲಾಯಿತು ಎಂದು ಅಶೀಸರ ತಿಳಿಸಿದರು.
ಬಳಿಕ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯತ್ ಜೀವವೈವಿಧ್ಯ ಮಂಡಳಿ ಸಮಿತಿ ಸಭೆಯಲ್ಲಿ ಸಹ ಗ್ರಾಮಸ್ಥರು ಗ್ರಾಮದ ಕೆರೆ, ಹಳ್ಳ, ಅರಣ್ಯ ಪ್ರದೇಶ, ಗೋಮಾಳ ಒಟ್ಟು 74 ಎಕರೆ ಜಾಗವನ್ನು ಖಾಸಗಿಯವರು ಕಬಳಿಕೆ ಮಾಡದಂತೆ ತಡೆಯಬೇಕು ಎಂದು ಮನವಿ ಮಾಡಿದರು. ಈ ಕುರಿತು ಸೂಕ್ತ ನಿರ್ದೇಶನವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

error: Content is protected !!