ಶಿವಮೊಗ್ಗ, ಜುಲೈ 30 : ವಿವಿಧ ಕಾರಣಗಳಿಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸಕಾಲಿಕ ಸೇವೆ ನೀಡುವುದರ ಜೊತೆಗೆ ಜಿಲ್ಲೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರವಾಸಿಗರೊಂದಿಗೆ ವ್ಯವಹರಿಸುವ ಶ್ರಮಜೀವಿ ಆಟೋ ಚಾಲಕರ ಸೇವೆ ಅಭಿನಂದನೀಯವಾದುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಸೇವಾಭಾರತಿ, ಪ್ರೇರಣಾ ಟ್ರಸ್ಟ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಸೋಂಕು ಹರಡುವಿಕೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ 750 ಆಟೋಚಾಲಕರಿಗೆ ಫುಡ್ ಕಿಟ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೋವಿಡ್ ಸೋಂಕಿನಿಂದಾಗಿ ಜನಸಾಮಾನ್ಯರ ಜೀವನ ನಿರ್ವಹಣೆ ದುಸ್ತರವಾಗಿದೆ. ಅನೇಕ ಸಮಸ್ಯೆ-ಸವಾಲುಗಳು ಎದುರಾಗಿವೆ. ಈ ವಾಸ್ತವ ಸಂಗತಿಯನ್ನು ಅರಿತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಸೋಂಕಿನ ಮೊದಲ ಹಂತದಲ್ಲಿ ರೂ.5,000/- ಹಾಗೂ ಎರಡನೇ ಹಂತದಲ್ಲಿ ರೂ.3,000/-ಗಳ ಆರ್ಥಿಕ ನೆರವನ್ನು ನೀಡಲಾಗಿದೆ ಎಂದವರು ನುಡಿದರು.
ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿ ಧರ್ಮ, ಭಾಷೆ ಮೀರಿದ ಮಾನವೀಯ ಸಹಕಾರ ಎಲ್ಲಾ ಧರ್ಮೀಯರಲ್ಲೂ ಕಾಣಬಹುದಾಗಿತ್ತು ಎಂದ ಅವರು, ಆತ್ಮೀಯರು, ಬಂಧುಗಳು ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕು. ಇದು ರಾಜಕಾರಣಗಳಿಗೂ ಅನ್ವಯವಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲೆಯನ್ನು ಮಾದರಿ ನಗರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಜೋಗದ ಜ¯ಪಾತ, ಸಕ್ರೆಬೈಲು, ಉಡುಗುಣಿ ಮುಂತಾದ ಪ್ರವಾಸಿ ತಾಣಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಇದರಿಂದಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ವೇಗವಾಗಿ ಬದಲಾಗುತ್ತಿರುವ ನಗರದ ವ್ಯವಸ್ಥೆಯಿಂದಾಗಿ ಆಟೋಚಾಲಕರಿಗೆ ಯಾವುದೇ ಅಡಚಣೆಯೂ ಆಗದಂತೆ ದೂರದೃಷ್ಟಿಯನ್ನು ಇಟ್ಟುಕೊಂಡು ಯೋಜನೆ ರೂಪಿಸಿ ಅನುಷ್ಠಾನಗೊಳಿಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಜ್ಗರ್ಪಾಷಾ, ಶಫೀ, ಅಬ್ದುಲ್ಗನಿ, ಮಾಲತೇಶ್, ಬಳ್ಳೆಕೆರೆ ಸಂತೋಷ್, ಬಾಷಾ, ಗುರುರಾಜ್ ಸೇರಿದಂತೆ ನಗರದ ಎಲ್ಲಾ ಆಟೋಗಳ ಚಾಲಕರು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.