ಶಿವಮೊಗ್ಗ, ಸೆಪ್ಟೆಂಬರ್-27 ; ಜಿಲ್ಲೆಯಲ್ಲಿ 22ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ದಿ ಪಡಿಸುವ ನೂತನ ಪ್ರಯೋಗಗಳಲ್ಲಿ ಯುವಜನತೆ ತೊಡಗಿಸಿಕೊಂಡಲ್ಲಿ ಜಿಲ್ಲೆಯನ್ನು ಉತ್ತಮ ಪ್ರವಾಸಿ ಕ್ಷೇತ್ರವಾಗಿಸುವ ವಿಫುಲ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆ, ಕುವೆಂಪು ವಿಶ್ವವಿದ್ಯಾಲಯ ಹಾಗೂ ಸಹ್ಯಾದ್ರಿ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಅಧ್ಯಯನದ ವಿದ್ಯಾರ್ಥಿಗಳು ತಮ್ಮದೇ ಊರಿನ ಸುತ್ತಮತ್ತಲಿನ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳನ್ನೇ ಉದ್ಯಮವಾಗಿಸಿಕೊಂಡು ನೂರಾರು ಜನರಿಗೆ ಉದ್ಯೋಗ ದೊರಕಿಸುವತ್ತ ಆಲೋಚಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಾಗ್ದೇವಿ ಹೆಚ್.ಎಂ ಮಾತನಾಡಿ ಪ್ರವಾಸೋದ್ಯಮ ಅಧ್ಯಯನದ ವಿದ್ಯಾರ್ಥಿಗಳು ಆಸಕ್ತಿಯಿಂದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ಸ್ಥಳೀಯ ಪ್ರದೇಶಗಳನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿ ಪಡಿಸಬೇಕು ಎಂದರು.
ಮುಂದುವರೆದ ದೇಶಗಳು ಪ್ರವಾಸೋದ್ಯಮದಿಂದಲೇ ಹೆಚ್ಚಿನ ಆದಾಯ ಗಳಿಸುತ್ತಿದ್ದು ನಮ್ಮ ದೇಶದಲ್ಲೂ ಸಹ ಅಂತಹ ಕಾರ್ಯ ಆಗಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಈ ಕುರಿತು ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಬೇಕು ಎಂದು ಅವರು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕøತಿಕ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಎಲ್. ಹನುಮ ನಾಯ್ಕ್ ಹಾಗೂ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಶಶಿರಾಜ. ಯು ಉಪಸ್ಥಿತರಿದ್ದರು.