ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದಿದೆ : ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಜೂನ್ 08 :ದೇಶ ಕಟ್ಟುವಲ್ಲಿ ಯುವಜನತೆಯ ಪಾತ್ರ ಮತ್ತು ಜವಾಬ್ದಾರಿ ದೊಡ್ಡದಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಭಾರತ ಸರ್ಕಾರದ ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಮೃತ ಕಾಲದ ಪಂಚಪ್ರಾಣ ಇಂಡಿಯಾ @ 2047 ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹಿಂದೆ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನವಾದವರು ಇದೇ ಯುವಶಕ್ತಿ. ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಭೆಯಲ್ಲಿ ‘ಎಲ್ಲಿಯವರೆಗೆ ನಮ್ಮ ದೇಶದ ಯುವಶಕ್ತಿ ಪ್ರೇರಣೆಯಿಂದ ಕೆಲಸ ಮಾಡುತ್ತದೋ ಅಲ್ಲಿಯವರೆಗೆ ದೇಶಕ್ಕೆ ಸಾವಿಲ’್ಲ ಎಂದಿದ್ದರು. ಯುವಜನತೆ ಒಂದು ದೊಡ್ಡ ಶಕ್ತಿ, ಶಿಸ್ತಿನಿಂದ ಸಾಗಿದಾಗ ಸಾಧನೆ ಸಾಧ್ಯ ಎಂದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಶೇಷವಾಗಿ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಇದೀಗ ಶತಮಾನೋತ್ಸವದ ಅಂಗವಾಗಿ ಐದು ಅಂಶಗಳ ಆಧಾರದಲ್ಲಿ ಪಂಚಪ್ರಾಣ ಇಂಡಿಯಾ @ 2047 ಎಂಬ ಕಾರ್ಯಕ್ರಮದಡಿ ಯುವ ಉತ್ಸವವನ್ನು ನಡೆಸುತ್ತಿದೆ.
ಅಭಿವೃದ್ದಿ ಹೊಂದಿದ ಭಾರತದ ಗುರಿ, ಗುಲಾಮಗಿರಿ ಮನಸ್ಥಿತಿಯನ್ನು ತೆಗೆದು ಹಾಕುವುದು, ಯುವಶಕ್ತಿ ಪ್ರೇರಣೆ, ಪರಂಪರೆ ಉಳಿಸಿ ಬೆಳೆಸುವುದು, ಐಕ್ಯತೆ-ಒಗ್ಗಟ್ಟಿನ ಚಿಂತನೆ ಮತ್ತು ನಾಗರೀಕ ಕರ್ತವ್ಯದ ಕುರಿತು ಯುವಜನತೆಯಲ್ಲಿ ಪ್ರೇರಣೆ ತುಂಬಲು ಈ ಕಾರ್ಯಕ್ರಮ ಆಯೋಜಿಸಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕು.
ಪ್ರಸ್ತುತ ಯುಪಿಎಸ್‍ಸಿಯಂತಹ ಪರೀಕ್ಷೆಗಳಲ್ಲಿ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಸರಿಸಮಾನ ಸ್ಪರ್ಧೆ ನೀಡುತ್ತಿರುವುದು ಸಂತೋಷದ ವಿಚಾರ. ಯುವಜನತೆ ಕೌಶಲ್ಯವನ್ನು ಬೆಳಿಸಿಕೊಳ್ಳಬೇಕು. ಕೌಶಲ್ಯಾಭಿವೃದ್ದಿ ಕೋರ್ಸ್‍ಗಳ ಉಪಯೋಗ ಪಡೆಯಬೇಕೆಂದರು.
ಪ್ರಸ್ತುತ ಜಿಲ್ಲೆ ಸರ್ವಾಂಗೀಣ ಅಭಿವೃದ್ದಿ ಕಾಣುತ್ತಿದೆ. 2009 ರಿಂದ 2022 ರಲ್ಲಿ ಅನೇಕ ಅಭಿವೃದ್ದಿ ಕೆಲಸಗಳಾಗಿ ಉತ್ತಮ ಬದಲಾವಣೆ ಕಂಡಿದೆ. ಮೆಡಿಕಲ್ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪಶುವೈದ್ಯಕೀಯ ವಿದ್ಯಾಲಯ, ಎಂಜಿನಿಯರಿಂಗ್ ಕಾಲೇಜು, 2 ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಕಾಲೇಜು, ರ್ಯಾಪಿಡ್ ಆಕ್ಷನ್ ಫೋರ್ಸ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ಹೀಗೆ ವಿವಿಧ ಆಯಾಮದಲ್ಲಿ ಅಭಿವೃದ್ದಿ ಕಂಡಿದೆ. ಈಗ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲ್ವೆಗೆ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಮನವಿ ಸಲ್ಲಿಸಬಾಗಿದೆ. ಶೀಘ್ರವೇ ವಿಮಾನನಿಲ್ದಾಣದಲ್ಲಿ ವಿಮಾನಗಳ ಸೇವೆ ಆರಂಭವಾಗಲಿದೆ. ರೂ.1600 ಕೋಟಿ ವೆಚ್ಚದ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಶಂಕುಸ್ಥಾಪನೆಯಾಗಿದ್ದು ಇದರಿಂದ 10 ರಾಜ್ಯಕ್ಕೆ ಸಂಪರ್ಕ ಲಭಿಸಲಿದ್ದು ಕಾಮಗಾರಿ ಆರಂಭವಾಗಿದೆ ಎಂದರು.
ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ(ಸೌಥೆರ್ನ್ ರೀಜನ್) ಎಂ.ಎನ್.ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ 45 ಕೋಟಿ ಯುವಜನರನ್ನು ಹೊಂದಿರುವ ಯುವ ದೇಶ ನಮ್ಮದಾಗಿದೆ. ಪ್ರಪಂಚದಲ್ಲೇ ಜನಸಂಖ್ಯೆ ಮತ್ತು ಮಾನವ ಸಂಪನ್ಮೂಲದಲ್ಲಿ ಒಂದನೇ ಸ್ಥಾನದಲ್ಲಿರುವ ನಮ್ಮ ದೇಶದಲ್ಲಿ ಅಗಾಧ ಶಕ್ತಿಯ ಯುವಜನತೆ ಇದೆ. ಈ ಶಕ್ತಿಯನ್ನು ದೇಶ ಕಟ್ಟುವ ಚಟುವಟಿಕೆಯಲ್ಲಿ ಬಳಸಿಕೊಂಡಲ್ಲಿ ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.
ಸ್ವಾತಂತ್ರ್ಯೋತ್ಸವದ ಬೆಳ್ಳಿ ಹಬ್ಬದ ಪ್ರಯುಕ್ತ 1972 ರಲ್ಲಿ ನೆಹರು ಯುವ ಕೇಂದ್ರವನ್ನು ಸ್ಥಾಪಿಸಲಾಯಿತು. ನೆಹರು ಯುವ ಕೇಂದ್ರ ಮತ್ತು ಎನ್‍ಎಸ್‍ಎಸ್ ಯುವಜನತೆಗಾಗಿ ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳ ನಿರ್ವಹಣೆ ಮಾಡುತ್ತಾ, ಯುವಜನತೆಗೆ ಪ್ರೇರಣೆಯಾಗಿದೆ. ಇದೀಗ ದೇಶ ಅಮೃತ ಮಹೋತ್ಸವ ಆಚರಿಸಿದೆ. ಮುಂಬರುವ ಶತಮಾನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಐದು ಅಂಶಗಳ ಪಂಚ್‍ಪ್ರಾಣ್ ಕಾರ್ಯಕ್ರಮವನ್ನು ಆಯೋಜಿಸಿದ್ದು ದೇಶದ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಯುವಶಕ್ತಿ ಈ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕೆಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅದಿಕಾರಿ ಉಲ್ಲಾಸ್ ಕೆಟಿಕೆ ಮಾತನಾಡಿ ಜಿಲ್ಲಾ ಮಟ್ಟದ ಯುವ ಉತ್ಸವ 2023-24 ರಲ್ಲಿ ಯುವಕ-ಯುವತಿಯರಿಗೆ ಭಾಷಣ ಸ್ಪರ್ಧೆ(ಕನ್ನಡ/ಹಿಂದಿ/ಇಂಗ್ಲಿಷ್), ಸಾಂಸ್ಕøತಿ ಉತ್ಸವದಲ್ಲಿ ಜಾನಪದ ನೃತ್ಯ, ಯುವ ಬರಹಗಾರರಿಗೆ ಕವಿತೆ ಸ್ಪರ್ಧೆ, ಯುವ ಛಾಯಾಗ್ರಾಹಕ ಸ್ಪರ್ಧೆ(ಮೊಬೈಲ್ ಫೋನ್) ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿದ್ದು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನ ಪ್ರಶಸ್ತಿ ಪತ್ರ ನೀಡಲಾಗುವುದು. ಹಾಗೂ ಇಲ್ಲಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಪ್ರಯುಕ್ತ ಕುವೆಂಪು ರಂಗಮಂದಿರದ ಒಳ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಟಿಟಿಸಿ, ಭದ್ರಾವತಿ ನಗರಸಭೆ, ಕೇಂದ್ರ ವಾರ್ತಾ ಸಚಿವಾಲಯದ ಸಂಹವನ ಇಲಾಖೆಗಳು ಇಲಾಖಾ ಸೌಲಭ್ಯಗಳ ಕುರಿತಾದ ಮಳಿಗೆಗಳನ್ನು ಸ್ಥಾಪಿಸಿದ್ದು, ಸಂಸದರು ಚಾಲನೆ ನೀಡಿದರು.
ಯುವ ಉತ್ಸವ ಸ್ಪರ್ಧೆಗಳಿಗೆ 15 ರಿಂದ 29 ವರ್ಷದೊಳಗಿನ ಯುವಜನತೆ ಪಾಲ್ಗೊಳ್ಳಲು ಅವಕಾಶವಿದ್ದು ಐದು ಸ್ಪರ್ಧೆಗಳಿಂದ ಸೇರಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸ್ಪರ್ಧೆಗಳು ಕುವೆಂಪು ರಂಗಮಂದಿರ ಮತ್ತು ಎಟಿಎನ್‍ಸಿಸಿ ಕಾಲೇಜಿನಲ್ಲಿ ನಡೆಯಿತು.
ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಎಂ.ನಾಗರಾಜ್ ಇತರರು ಪಾಲ್ಗೊಂಡಿದ್ದರು.

error: Content is protected !!